MLC attacks illegal transportation of silt 
ಕೊಪ್ಪಳ

ಹೂಳು ಅಕ್ರಮ ಸಾಗಣೆ ಮೇಲೆ ಎಂಎಲ್ಸಿ ದಾಳಿ

ಪ್ರಮುಖ ಮುಖ್ಯಾಂಶಗಳು

  • ಹೊಲಕ್ಕೆ ಸಾಗಿಸುತ್ತಿದ್ದಾಗಿ ಸಿಪಿಐ ಹೇಳಿಕೆ
  • ಪೊಲೀಸ್​ ಪಾತ್ರ ತನಿಖೆಗೆ ಎಸ್ಪಿ ಸೂಚನೆ
ಕೊಪ್ಪಳ: ತಾಲೂಕಿನ ತುಂಗಭದ್ರಾ ಹಿನ್ನೀರು ಪ್ರದೇಶದಿಂದ ಅಕ್ರಮವಾಗಿ ಹೂಳು ಸಾಗಿಸುತ್ತಿದ್ದ ಟಿಪ್ಪರ್​ಗಳ ಮೇಲೆ ವಿಧಾನ ಪರಿಷತ್​ ಸದಸ್ಯೆ ಹೇಮಲತಾ ನಾಯಕ ದಾಳಿ ನಡೆಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಕರ್ಕಿಹಳ್ಳಿ ಗ್ರಾಮಕ್ಕೆ ತೆರಳಿ ವಾಪಸ್​ ಬರುವಾಗ ಟಿಪ್ಪರ್​ ಕಂಡ ಹೇಮಲತಾ ತಡೆದು ವಿಚಾರಿಸಿದ್ದಾರೆ. ಈವೇಳೆ ಚಾಲಕರು ಯಾವುದೇ ಮಾಹಿತಿ ನೀಡಿಲ್ಲ. ಸ್ಥಳದಲ್ಲಿ ಜಮಾಯಿಸಿದ ಜನರು ನಿತ್ಯ ಹಲವು ಟಿಪ್ಪರ್​ಗಳು ಹೂಳು ತುಂಬಿಕೊಂಡು ಓಡಾಡುತ್ತಿವೆ. ಇಟ್ಟಂಗಿ ಭಟ್ಟಿಗೆ ಸಾಗಿಸುತ್ತಿದ್ದಾರೆ. ರಸ್ತೆ ಹಾಳಾಗಿದ್ದು, ಧೂಳು ಬರುತ್ತಿದೆ. ಇದರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಪರವಾನಗಿಯನ್ನೂ ಪಡೆದಿಲ್ಲವೆಂದು ಆರೋಪಿಸಿದ್ದಾರೆ. ಪರವಾನಗಿ ಪಡೆದು ಸಾಗಿಸುತ್ತಿರುವುದಾಗಿ ಹೇಳಿದ ಚಾಲಕರು ಅರೆಬರೆ ಮಾಹಿತಿ ನೀಡಿದ್ದಾರೆ. ಮುನಿರಾಬಾದ್​ ಪಿಎಸ್​ಐಗೆ ಕರೆ ಮಾಡಿದ ಎಂಎಲ್ಸಿ, ವಿಚಾರಿಸಿದ್ದಾರೆ. ಅವರು ಸರಿಯಾಗಿ ಸ್ಪಂದಿಸಿಲ್ಲ.
ತಕ್ಷಣ ಹೇಮಲತಾಗೆ ಕರೆ ಮಾಡಿದ ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ಜಯಪ್ರಕಾಶ ತಮ್ಮ ಹೊಲಕ್ಕೆ ಹೂಳು ಸಾಗಣೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸಾಗಿಸಬಾರದಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಪರವಾನಗಿ ಪಡೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದಾಗ ಅದಕ್ಕೆ ತಗಲುವ ದಂಡ ಕಟ್ಟುವುದಾಗಿ ಹೇಳಿಕೊಂಡಿದ್ದಾರೆ. ತಕ್ಷಣ ಸ್ಥಳದಲ್ಲೇ ಮೊಕ್ಕಾಂ ಹೂಡಿದ ಎಂಎಲ್ಸಿ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 112 ಸಿಬ್ಬಂದಿ ಆಗಮಿಸಿ ಟಿಪ್ಪರ್​ ವಶಕ್ಕೆ ಪಡೆದಿದ್ದಾರೆ. ಟಿಪ್ಪರ್​ ಹೊಸಳ್ಳಿಯ ವೇದಮೂರ್ತಿ ಎಂಬುವವರಿಗೆ ಸೇರಿದೆ ಎನ್ನಲಾಗಿದೆ. ಪರವಾನಗಿ ಇಲ್ಲದೇ ಹೂಳು ಸಾಗಿಸಿದ್ದಕ್ಕೆ ಟಿಪ್ಪರ್​ ಮಾಲೀಕರಿಗೆ ಗಣಿ ಇಲಾಖೆ 25 ಸಾವಿರ ರೂ.ದಂಡ ವಿಧಿಸಿದೆ.

ತನಿಖೆಗೆ ಸೂಚನೆ

ಪೊಲೀಸ್​ ಇಲಾಖೆ ಮೇಲೆಯೇ ಅಕ್ರಮವಾಗಿ ಹೂಳು ಸಾಗಣೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಸ್ಪಿ ಡಾ.ರಾಮ್​ ಎಲ್​. ಅರಸಿದ್ದಿ ತನಿಖೆಗೆ ಸೂಚಿಸಿದ್ದಾರೆ. ಡಿವೈಎಸ್ಪಿ ಮುತ್ತಣ್ಣ ಸರವಗೊಳಗೆ ಪೊಲೀಸರ ಪಾತ್ರ ಕುರಿತು ವರದಿ ಸಲ್ಲಿಕೆ ಮಾಡುವಂತೆ ತಿಳಿಸಿದ್ದು, ಪ್ರಕರಣ ಕುತೂಹಲ ಮೂಡಿಸಿದೆ.