- ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ
- ಎರಡು ದಿನದಲ್ಲಿ ಎಲ್ಲವೂ ಸರಿಹೋಗುವುದು
ಕೊಪ್ಪಳ : ಸಚಿವ ಸ್ಥಾನ ತಪ್ಪಿದ್ದಕ್ಕೆ ಶಾಸಕರ ಅಸಮಾಧಾನ ಸಹಜ. ಅಧಿಕಾರ ಎಲ್ಲರಿಗೂ ಬೇಕು. ಅದು ತಪ್ಪಲ್ಲ ಎಂದು ಸಚಿಚ ಬಸವರಾಜ ರಾಯರಡ್ಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲ ಶಾಸಕರಿಗೂ ಸಿಎಂ, ಪಿಎಂ ಆಗಬೇಕೆಂಬ ಆಸೆ ಇರುತ್ತದೆ. ಎಲ್ಲರನ್ನೂ ತೃಪ್ತಿಪಡಿಸಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ. ಕಾಂಗ್ರೆಸ್ ನಲ್ಲಿ ಐದಾರು ಬಾರಿ ಶಾಸಕರಾದವರು ಬಹಳ ಜನ ಇದ್ದಾರೆ. ಒಂದು ಅವಕಾಶ ಸಿಕ್ಕರೆ ಕೆಲಸ ಮಾಡಬಹುದೆಂದು ಸಚಿವರಾಗಲು ಪ್ರಯತ್ನಿಸಿದ್ದಾರೆ. ಆದರೆ, 33 ಸಚಿವರನ್ನು ಮಾತ್ರ ಮಾಡಬಹುದು. ಎಲ್ಲರನ್ನೂ ಮಾಡಲಾಗದು. ಅಸಮಾಧಾನಿತರನ್ನು ವರಿಷ್ಠರು ಸಮಾಧಾನಿಸುವರು. ಒಂದೆರಡು ದಿನದಲ್ಲಿ ಎಲ್ಲವೂ ಸರಿಯಾಗುವುದೆಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆ. ಹಿಟ್ನಾಳಗೆ ಅವಕಾಶ ನೀಡುವಂತೆ ನಾನೂ ಸಿದ್ದರಾಮಯ್ಯಗೆ ಮನವಿ ಮಾಡಿರುವೆ. ಕಾರ್ಯಕರ್ತರು ರಾಜೀನಾಮೆ ನೀಡಬಾರದು. ಕಳೆದ ಬಾರಿ ನನಗೂ ಮಂತ್ರಿ ಸ್ಥಾನ ಸಿಗಲಿಲ್ಲ. ನಾನೂ ಯಾವತ್ತೂ ರಾಜೀನಾಮೆ ನೀಡುವುದಾಗಿ ಹೇಳಲಿಲ್ಲ. ಯಾರ ಬಳಿಯೂ ಒತ್ತಡ ಹೇರಿಸಲಿಲ್ಲ. ಸಿಎಂ ಈಗಲೂ ನನಗೆ ಬೇಡ ಎಂದರೆ ನಾನು ಮಂತ್ರಿ ಪದವಿ ತ್ಯಜಿಸುವೆ ಎಂದರು.
ದೊಡ್ಡನಗೌಡಗೆ ಟಾಂಗ್
ಕುಷ್ಟಗಿ ಶಾಸಕ ದೊಡ್ಡನಗೌಡ ಮೂರು ಬಾರಿ ಎಂಎಲ್ಎ ಆಗಿದ್ದಾರೆ. ಬಿಜೆಪಿಯಲ್ಲಿ ಶಾಸಕರನ್ನು ಖರೀದಿಸುವ ಚಾಳಿ ಹಾಸುಹೊಕ್ಕಾಗಿದೆ. ಅದಕ್ಕೆ ದೊಡ್ಡನಗೌಡರು ತಮ್ಮ ಪಕ್ಷದ ಅನುಭವವನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಸೂಟ್ಕೇಸ್ ಸಂಸತಿ ಇಲ್ಲವೆಂದು ತಿರುಗೇಟು ನೀಡಿದರು. ಸಚಿವ ಸ್ಥಾನ ಹಂಚಿಕೆ ಬಗ್ಗೆ ನಂಜಯನಮಠ ಏನು ಹೇಳಿದ್ದಾರೆಂದು ಗೊತ್ತಿಲ್ಲ. ಎಐನಲ್ಲಿ ಏನೂಬೇಕಾದರೂ ಮಾಡಬಹುದು. ಕೆಲವೊಮ್ಮೆ ಭಾವನಾತ್ಮಕವಾಗಿ ಮಾತನಾಡಿರಬಹುದು. ಸಚಿವ ಬಿ.ನಾಗೇಂದ್ರ ಮೇಲೆ ಆರೋಪ ಇದೆ. ಹಾಗಂತ ಅವರನ್ನು ಅಪರಾಧಿ ಎನ್ನಲಾಗದು. ಬಿಜೆಪಿ ಸಂಸದರು, ಎಂಎಲ್ಎ, ಎಂಎಲ್ಸಿಗಳ ಮೇಲೆ ಸಾಕಷ್ಟು ಕೇಸ್ ಇವೆ. ಅವರೆಲ್ಲ ಅಧಿಕಾರದಲ್ಲಿ ಇಲ್ಲವಾ ಎಂದು ರಾಯರಡ್ಡಿ ಪ್ರಶ್ನಿಸಿದರು.
ಮಂತ್ರಿಮಂಡಲ ಆಯ್ಕೆ ಮಾಡುವ ಕೆಲಸ ಸಿಎಂ ಹಾಗೂ ಹೈಕಮಾಂಡ್ಗೆ ಬಿಟ್ಟಿದ್ದು. ಮಹಿಳಾ ಸಚಿವರನ್ನು ಮಾಡಿಲ್ಲ. ಈ ಬಗ್ಗೆ ನಾನು ಸಿಎಂ ಜೊತೆ ಚರ್ಚಿಸಿಲ್ಲ. ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅನುಭವಿ ರಾಜಕಾರಣಿ. ಸದ್ಯ ರಾಜಕೀಯ ಬದಲಾಗಿದೆ. ವಿಪ ಸದಸ್ಯರ ಒತ್ತಡ ಹೆಚ್ಚಿದೆ. ಹೀಗಾಗಿ ಅವರಿಗೆ ರಾಜೀನಾಮೆ ನೀಡುವಂತೆ ಸಿಎಂ ಹೇಳಿರಬಹುದು. ಬೇರೆ ಅರ್ಥವಿಲ್ಲ.