ಹಿಟ್ನಾಳ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಮೇಲಿನ ದೌರ್ಜನ್ಯ ತಡೆ ಜನಸಂಪರ್ಕ ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕಾಶಿಮಠ ಉದ್ಘಾಟಿಸಿದರು. ಪ್ರಮುಖರಾದ ಶಿವಲೀಲಾ ವನ್ನೂರು, ಡಾ.ಮಂಜುಳಾ ಶರ್ಮಾ, ಬಸವರಾಜ, ಕೃಷ್ಣಮೂರ್ತಿ ಇತರರಿದ್ದರು.
- ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕಾಶಿಮಠ ಕಳವಳ
- ಮುನಿರಾಬಾದ್ ಜನಸಂಪರ್ಕ ಸಂವಾದ
ಮುನಿರಾಬಾದ್: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ಕಾನೂನಿನ ಬಗ್ಗೆ ತಿಳಿಯದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕಾಶಿಮಠ ಕಳವಳ ವ್ಯಕ್ತಪಡಿಸಿದರು.
ಸಮೀಪದ ಹಿಟ್ನಾಳ ಗ್ರಾಪಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಗ್ರಾಪಂ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿ ಜನಸಂಪರ್ಕ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯವನ್ನು ಬಾಲ್ಯವಿವಾಹಮುಕ್ತ ಮಾಡಲು ಸರ್ಕಾರ ತಿದ್ದುಪಡಿ ತಂದಿದ್ದು, ಇದರನ್ವಯ ಬಾಲ್ಯವಿವಾಹಗಳು ಸಂಪೂರ್ಣ ಅಸಿಂಧುವಾಗಲಿವೆ. ಬಾಲ್ಯವಿವಾಹ ಮಾಡುವವರಿಗೆ ಹಾಗೂ ಅದಕ್ಕೆ ಪ್ರೋತ್ಸಾಹ ನೀಡುವವರಿಗೆ 1 ರಿಂದ 2ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಕಾನೂನು ಸಲಹೆಗಾರ್ತಿ ಶಿವಲೀಲಾ ವನ್ನೂರು ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಗೆ ಪೋಕ್ಸೊ ಕಾಯ್ದೆ ಪ್ರಮುಖವಾಗಿದ್ದು, 18 ವರ್ಷದೊಳಗಿನ ಮಕ್ಕಳ ಮೇಲಿನ ಲೈಂಗಿಕ ಹಲ್ಲೆಗೆ ಕನಿಷ್ಠ 20 ವರ್ಷದಿಂದ ಆಜೀವ ಹಾಗೂ ಪ್ರೋತ್ಸಾಹ ನೀಡುವವರಿಗೂ 7ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಗ್ರಾಮ ಮಟ್ಟದ ಮಕ್ಕಳ ರಕ್ಷಣಾ ಸಮಿತಿಗಳು ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಹಿಟ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜುಳಾ ಶರ್ಮಾ ಮಾತನಾಡಿದರು. ಹಿಟ್ನಾಳ ಸ.ಪ್ರ.ದ.ಕಾಲೇಜು ಪ್ರಾಂಶುಪಾಲ ಬಸವರಾಜ, ಪಿಡಿಒ ಕೃಷ್ಣಮೂರ್ತಿ, ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಾ ಸಜ್ಜನ್, ರಮೇಶ ಹರಿಜನ, ಸುರೇಶ ಯೋಗಿ ಇತರರಿದ್ದರು.