ಕೊಪ್ಪಳದ ಮಾಸ್ತಿ ಪಬ್ಲಿಕ್​ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಾಕ್ಷ್ಯಚಿತ್ರ ಹಾಗೂ ಇ-&ಬುಕ್​ ಬಿಡುಗಡೆ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಿದರು. ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಲ, ಕರ್ನಾಟಕ ಲಲಿತಕಲಾ ಅಕಾಡಮಿಯ ಅದ್ಯಕ್ಷ ಪ.ಸ. ಕುಮಾರ, ಡಿಸಿ, ಸಿಇಒ, ಎಸ್ಪಿ ಇತರರಿದ್ದರು. 
ಕೊಪ್ಪಳ

ಪ್ರತಿ ಹಳ್ಳಿಗೂ ಲಲಿತಕಲೆ ತಲುಪಲಿ, ಸಚಿವ ತಂಗಡಗಿ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಸಚಿವ ಶಿವರಾಜ ತಂಗಡಗಿ ಸಲಹೆ
  • ಸಾಕ್ಷ್ಯಚಿತ್ರ ಹಾಗೂ ಇ-ಬುಕ್​ ಬಿಡುಗಡೆ
ಕೊಪ್ಪಳ: ಲಲಿತಕಲಾ ಅಕಾಡೆಮಿಯು ಕೇವಲ ಮಹಾನಗರಗಳಿಗೆ ಸೀಮಿತವಾಗದೆ ರಾಜ್ಯದ ಪ್ರತಿಯೊಂದು ಹಳ್ಳಿಗಳನ್ನು ತಲುಪಬೇಕು. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಮಾಸ್ತಿ ಪಬ್ಲಿಕ್​ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಾಕ್ಷ್ಯಚಿತ್ರ ಹಾಗೂ ಇ-ಬುಕ್​ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಚಿವನಾದ ಮೇಲೆ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಕಲೆಯನ್ನು ರಾಜ್ಯಾದ್ಯಂತ ಪಸರಿಸುವ ಕೆಲಸ ಮಾಡುತ್ತಿದ್ದೇನೆ. ಕಳೆದ ಸರ್ಕಾರವು ಅಕಾಡೆಮಿಗೆ ಅಧ್ಯಕ್ಷರನ್ನು ನೇಮಕ ಮಾಡದೆ ರ್ನಿಲಕ್ಷಿಸಿತ್ತು. ನಮ್ಮ ಅವಧಿಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಹಂತದಲ್ಲಿ ಎಲ್ಲಾ ಅಕಾಡೆಮಿಗಳಿಗೆ ಸುಮಾರು 300-&400 ಸದಸ್ಯರನ್ನು ನೇಮಕ ಮಾಡಲಾಗಿದೆ. ಕರ್ನಾಟಕದ ಗಡಿಭಾಗದಲ್ಲಿಯೂ ಸಹ ಕಲಾ ಕಾರ್ಯಕ್ರಮಗಳನ್ನು ನಡೆಸಿದ್ದೇವೆ ಎಂದರು.
ಲಲಿತಕಲಾ ಅಕಾಡೆಮಿಯಿಂದ ಮನೆಗೊಂದು ಕಲಾಕೃತಿ ಕಾರ್ಯಕ್ರಮವನ್ನು ಮಾಡಲು ಯೋಚಿಸಿರುವುದು ಒಳ್ಳೆಯ ವಿಚಾರ. ಈ ಹಿಂದೆ ಪುಸ್ತಕ ಅಕಾಡೆಮಿಯಿಂದ ಮನೆಗೊಂದು ಗ್ರಂಥಾಲಯ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವಿದೇಶಗಳ ಲೇಖಕರು ಮತ್ತು ಪ್ರಕಾಶಕರು ಅತ್ಯಂತ ಶ್ರೀಮಂತರು, ಏಕೆಂದರೆ ಅಲ್ಲಿ ಜನರಿಗೆ ಓದುವ ಹವ್ಯಾಸವಿದೆ. ನಮ್ಮಲ್ಲಿಯೂ ಅಂತಹ ವಾತಾವರಣ ನಿಮಾರ್ಣವಾಗಬೇಕು. ಮಕ್ಕಳು ಮೊಬೈಲ್​ ಫೋನ್​ ಬಳಕೆಯನ್ನು ಕಡಿಮೆ ಮಾಡಿ, ಕಲೆ ಮತ್ತು ಸಾಹಿತ್ಯದ ಕಡೆಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಪೋಷಕರು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾದ ಪ.ಸ. ಕುಮಾರ್​ ಮಾತನಾಡಿ, ಅಕಾಡೆಮಿಯ 60 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಚಿತ್ರಕಲಾ ಸಮ್ಮೇಳನ ನಡೆದಿಲ್ಲ. ಬರುವ ಜೂನ್​ ತಿಂಗಳಲ್ಲಿ ಸಮ್ಮೇಳನ ನಡೆಸಲು ಯೋಜಿಸಲಾಗಿದೆ. ಅದಕ್ಕೂ ಮುಂಚಿತವಾಗಿ ಇಲಕಲ್​ ನಗರದಲ್ಲಿ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜನೆ ಮಾಡಲು ಸಚಿವರು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಡಿಸಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ. ರಾಮ್​ ಎಲ್​. ಅರಸಿದ್ದಿ, ಮಾಸ್ತಿ ಶಾಲೆಯ ಅಧ್ಯಕ್ಷ ಹುಲಗಪ್ಪ ಕಟ್ಟಿಮನಿ, ಚಿತ್ರಕಲಾವಿದರಾದ ಬಿ.ಪಿ. ಕಾರ್ತಿಕ್​, ಎಂ.ಜೆ. ದೊಡ್ಡಮನಿ, ರಾಜು ತೇರದಾಳ ಹಾಗೂ ಸಂಚಾಲಕ ವೆಂಕಟೇಶ ಬಡಿಗೇರ ಇತರರಿದ್ದರು.

ಮುಂಬರುವ ಬಜೆಟ್​ನಲ್ಲಿ ಲಲಿತಕಲಾ ಸಮ್ಮೇಳನಕ್ಕೆ ವಿಶೇಷ ಅನುದಾನ ಮೀಸಲಿಡುವುದಾಗಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಅಕಾಡೆಮಿಯ ಯಾವುದೇ ಕಾರ್ಯಕ್ರಮ ನಡೆದರೂ ಅದಕ್ಕೆ ವಿಶೇಷ ಬೆಂಬಲ ನೀಡುವುದಾಗಿ ಭರವಸೆ ನೀಡುತ್ತೇನೆ.