ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ವೀರೇಶ ಸಜ್ಜನ, ಗೀತಾಂಜಲಿ, ಕೊಟ್ರೇಶ ಶೆಡ್ಮಿ, ಸುನಿಲ್ ಹೆಸರೂರು, ಮಹೇಶ ಅಂಗಡಿ ಇದ್ದರು.
- ಜಿಲ್ಲಾ ಬಿಜೆಪಿ ನಾಯಕರ ಆಗ್ರಹ
ಕೊಪ್ಪಳ : ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನಾಯಕರು ನಗರದ ಡಿಸಿ ಕಚೇರಿ ಮುಂದೆ ಶುಕ್ರವಾರ ನಾಗೇಂದ್ರ ಪ್ರತಿಕೃತಿ ದಹಿಸಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಪಂಗಡಗಳಿಗೆ ಸೇರಬೇಕಾದ ನೂರಾರು ಕೋಟಿ ರೂ. ಅನುದಾನ ಕಳ್ಳರ ಪಾಲಾಗಿದೆ. ಸಚಿವ ಬಿ.ನಾಗೇಂದ್ರ ಹಗರಣದ ರೂವಾರಿ. ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಮೇಲೆ ಹೊರ ಬಂದಿದ್ದಾರೆ. ಬಡವರ ಹಣ ನುಂಗಿದ ಕಳಂಕ ಹೊತ್ತು ಮತ್ತೆ ಸಂಪುಟ ಸೇರಿದ್ದಾರೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದು ಬಯಲಾಗಿದೆ. ಎಲ್ಲದರಲ್ಲೂ ಭ್ರಷ್ಟಾಚಾರ ನಡೆಸುವುದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ವಾಗ್ದಾಳಿ ಮಾಡಿದರು.
ಕೂಡಲೇ ಸಚಿವ ಸ್ಥಾನದಿಂದ ನಾಗೇಂದ್ರ ಅವರನ್ನು ವಜಾಗೊಳಿಸಬೇಕು. ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು. ಸಂಪುಟದಿಂದ ನಾಗೇಂದ್ರ ಅವರನ್ನು ಕೈ ಬಿಡುವಂತೆ ಸೂಚಿಸಬೇಕು. ರಾಜ್ಯದ ಜನರ ಹಿತ ಕಾಯಬೇಕೆಂದು ಆಗ್ರಹಿಸಿದರು. ನಾಗೇಂದ್ರ ಪ್ರತಿಕೃತಿ ದಹಿಸಲು ಯತ್ನಿಸಿದಾಗ ತಡೆಯೊಡ್ಡಿದ ಪೊಲೀಸರು ಗೊಂಬೆ ಕಸಿದುಕೊಂಡರು. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ವೀರೇಶ ಸಜ್ಜನ, ಗೀತಾಂಜಲಿ, ಕೊಟ್ರೇಶ ಶೆಡ್ಮಿ, ಮಹಾಲಕ್ಷಿ$್ಮ ಕಂದಾರಿ, ಸುನಿಲ್ ಹೆಸರೂರು, ಮಹೇಶ ಅಂಗಡಿ ಇತರರಿದ್ದರು.