ಸಚವಿ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಮಂಗಳವಾರ ಕೊಪ್ಪಳದಲ್ಲಿ ಧರಣಿ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪ್ರಮುಖರಾದ ಬಸವರಾಜ ಗೌರಾ, ವೀರಭದ್ರಪ್ಪ ನಾಯಕ್, ರತ್ನಕುಮಾರಿ ಇದ್ದರು.
- ಬಿಜೆಪಿ ನಾಯಕರ ಆಗ್ರಹ
- ಅರ್ನಿದಿಷ್ಟ ಅವಧಿ ಧರಣಿ
ಕೊಪ್ಪಳ : ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ನಾಯಕರು ಮಂಗಳವಾರ ನಗರದ ಡಿಸಿ ಕಚೇರಿ ಎದುರು ಧರಣಿ ನಡೆಸಿದರು.
ಪರಿಶಿಷ್ಟ ಪಂಡಗ ಜನರ ಅಭಿವೃದ್ಧಿಗಾಗಿ ಇದ್ದ ನೂರಾರು ಕೋಟಿ ರೂ. ಅನುದಾನವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಬಡ ಜನರಿಗೆ ಸಿಗಬೇಕಿದ್ದ ಸೌಲಭ್ಯ ಕಳ್ಳರ ಪಾಲಾಗಿದೆ. ಇದಕ್ಕೆಲ್ಲ ಸಚಿವ ಬಿ.ನಾಗೇಂದ್ರ ನೇರ ಕಾರಣ. ಇದೇ ಆರೋಪದ ಮೇಲೆ ಹಿಂದಿನ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಡೆದಿದ್ದರು. ಸದ್ಯ ತನಿಖೆ ಮುಂದುವರೆದಿದೆ. ಆರೋಪ ಮುಕ್ತವಾಗಿಲ್ಲ. ಹೀಗಿದ್ದರೂ ಸಂಪುಟ ಸೇರಿಸಿಕೊಂಡಿರುವ ಸಿಎಂ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರ ಬೆಂಬಲಿಸುತ್ತಿದ್ದಾರೆ. ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದು, ಕಳಂಕಿತರಿಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ತನ್ನ ನಿಜ ಬಣ್ಣ ಬಯಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗೇಂದ್ರ ರಾಜೀನಾಮೆ ನೀಡಲೇಬೇಕು. ಅಲ್ಲಿವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ. ತುಳಿತಕ್ಕೆ ಒಳಗಾದ ಸಮುದಾಯದವರಿಗೆ ನ್ಯಾಯ ಸಿಗಬೇಕು. ಭ್ರಷ್ಟಾಚಾರ ಸಹಿಸಲು ಆಗದು. ಅಲ್ಲಿವರೆಗೂ ಕಲಾಪ ಸುಗಮವಾಗಿ ನಡೆಸಲು ಅವಕಾಶ ನೀಡುವುದಿಲ್ಲ. ತಕ್ಷಣ ಸಿಎಂ ರಾಜೀನಾಮೆ ಪಡೆದು ಮರ್ಯಾದೆ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ, ಸಿಎಂ ಡಿ.ಕೆ.ಶಿವಕುಮಾರ್, ಸಚಿವ ಬಿ.ನಾಗೇಂದ್ರ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು. ಮಳೆಯಲ್ಲೂ ಧರಣಿ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪ್ರಮುಖರಾದ ಬಸವರಾಜ ಗೌರಾ, ವೀರಭದ್ರಪ್ಪ ನಾಯಕ್, ರತ್ನಕುಮಾರಿ, ಗೀತಾ ಮುತ್ತಾಳ, ವಾಣಿಶ್ರೀ ಹಿರೇಮಠ, ಅರವಿಂದಗೌಡ ಪಾಟೀಲ್, ಅಪ್ಪಣ್ಣ ಪಡಕಿ, ರಾಜು ಬಾಕಳೆ, ವೀರೇಶ ಸಜ್ಜನ್, ಅಮರೇಶ ಮುರುಳಿ, ಎ.ವಿ.ಕಣವಿ ಇತರರಿದ್ದರು.