ದೇವಿ ದರ್ಶನಕ್ಕೆ ಗರ್ಭಗುಡಿ ಮುಖ್ಯದ್ವಾರದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು.
- ಹುಲಿಗಿಗೆ ಹರಿದು ಬಂದ ಲಕ್ಷಾಂತರ ಭಕ್ತರು
- ಗೌರಿ ಹುಣ್ಣಿಮೆ ಅಂಗವಾಗಿ ಬಂದ ಭಕ್ತರು
- ಭಕ್ತರಿಂದ ಹುಲಿಗೆಮ್ಮ ದೇವಿ ದರ್ಶನ
ಕೊಪ್ಪಳ: ತಾಲೂಕಿನ ಪವಿತ್ರ ಧಾರ್ಮಿಕ ಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಬುಧವಾರ ಗೌರಿ ಹುಣ್ಣಿಮೆ ಅಂಗವಾಗಿ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು. ಕಳೆದ ಸೀಗೆ ಹುಣ್ಣಿಮೆಯಲ್ಲಿ ಅತ್ಯಧಿಕ ಭಕ್ತಾದಿಗಳ ಆಗಮನದಿಂದ ಗದ್ದಲ, ಗಲಾಟೆ ಕಾಲ್ತುಳಿತ ಹಂತಕ್ಕೆ ತಲುಪಿದ ಹಿನ್ನಲೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಿತು.
ಹೊಸಪೇಟೆ ಕಡೆಯಿಂದ ಬರುವ ವಾಹನಗಳಿಗೆ ಕೋರಮಂಡಲ್ ಬೃಹತ್ ಮೈದಾನ, ಹಿಟ್ನಾಳ್ ಕಡೆಯಿಂದ ಬರುವ ವಾಹನಗಳಿಗೆ ತುಂಗಭದ್ರಾ ಪ್ರೌಢಶಾಲೆ ಮುಂಭಾಗ, ಗಂಗಾವತಿ ಶಿವಪುರ ಭಾಗದಿಂದ ಬರುವ ವಾಹನಗಳಿಗೆ ಶಿವಪುರ ರಸ್ತೆ, ದ್ವಿ ಚಕ್ರ ವಾಹನಗಳಿಗೆ ದೇವಸ್ಥಾನ ಸಂಪರ್ಕಿಸುವ ಹಿಂಭಾಗದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಯಿತು.
ಪಾದಚಾರಿ ಭಕ್ತಾದಿಗಳಿಗೆ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲು ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನ ದೇವಸ್ಥಾನಕ್ಕೆ ತೆರಳಲು ಅವಕಾಶವಿಲ್ಲದಂತೆ ಅಲ್ಲಲ್ಲಿ ಬ್ಯಾರಿಕೇಡ್ ಹಾಕಲಾಯಿತು. ಕೇವಲ ಪಾದಾಚಾರಿಗಳು ಮಾತ್ರ ಮುಖ್ಯ ದ್ವಾರದಿಂದ ಪ್ರವೇಶಿಸಲು ಅನುಕೂಲ ಕಲ್ಪಿಸಲಾಯಿತು. ಪೊಲೀಸ್ ವ್ಯವಸ್ಥೆ, ಬಿಗಿ ಪಹರೆ, ಸಂಚಾರ ನಿಯಂತ್ರಣದ ವ್ಯವಸ್ಥೆಗೆ ಕ್ಷೇತ್ರಕ್ಕೆ ಬಂದ ಭಕ್ತರು ಮೆಚ್ಚುಗೆ ವ್ಯಕ್ತ ಪಡಿಸಿದರು.