ಮೊದಲ ಬ್ಯಾಚ್‌ನ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿರುವುದು.
- 2ನೇ ಬ್ಯಾಚ್ ತರಬೇತಿ ಆರಂಭ
- 315 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ
ಕನಕಗಿರಿ: ನಿರೀಕ್ಷಿತ ಅರ್ಜಿಗಳು ಸಲ್ಲಿಕೆಯಾಗದೆ ಸ್ಥಳಾಂತರಿಸುವ ಹಂತ ತಲುಪಿದ್ದ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇನಾ ಆಯ್ಕೆ ಪೂರ್ವ ತರಬೇತಿಯ ಎರಡನೇ ಬ್ಯಾಚ್‌ಗೆ ನಿರೀಕ್ಷೆ ಮೀರಿ ಅರ್ಜಿಗಳು ಸಲ್ಲಿಕೆಯಾದ್ದರಿಂದ ಶಾಲೆ ಸ್ಥಳಾಂತರ ಯೋಚನೆ ಕೈಬಿಡಲಾಗಿದೆ.
ಸ್ಥಳೀಯ ಶಾಸಕರೇ ಆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಇಚ್ಛಾಶಕ್ತಿಯಿಂದ ಸೇನೆ ಹಾಗೂ ಇತರ ಯುನಿಫಾರಂ ಸೇವೆಗೆ ಸೇರಲು ತರಬೇತಿ ಪಡೆಯಲು ಮುಂದಾಗುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು 2024-25ನೇ ಸಾಲಿನಲ್ಲಿ ಇಲಾಖೆಯಿಂದ ಒಂದು ಬ್ಯಾಚ್‌ಗೆ 100 ಅಭ್ಯರ್ಥಿಗಳಿಗೆ 4 ತಿಂಗಳ ಅವಧಿಯ ತರಬೇತಿ ನೀಡಲು ಕನಕಗಿರಿ ಜತೆಗೆ ಕಲಬುರಗಿಗೆ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗಳನ್ನು ಮಂಜೂರು ಮಾಡಿಸಿ ಇಲ್ಲಿನ ಪಾಂಡುರಂಗ ದೇವಸ್ಥಾನದ ಸಮುದಾಯ ಭವನದಲ್ಲಿ ಚಾಲನೆ ನೀಡಿದ್ದರು.
ಆದರೆ, ವರ್ಷವಾದರೂ ಮೊದಲ ಬ್ಯಾಚ್‌ನ ತರಬೇತಿ ಆರಂಭವಾಗಿರಲಿಲ್ಲ. ತಾಂತ್ರಿಕ ತೊಂದರೆ ಜತೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ವಿರಳವಾಗಿತ್ತು. ಇದು ಸ್ಥಳೀಯರ ಬೇಸರಕ್ಕೂ ಕಾರಣವಾಗಿತ್ತಲ್ಲದೇ, ಸ್ಥಳಾಂತರಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು.
ಕೊನೆಗೆ 2025ರ ಅ.17ರಂದು 35 ಅಭ್ಯರ್ಥಿಗಳೊಂದಿಗೆ 4 ತಿಂಗಳ ಮೊದಲ ಬ್ಯಾಚ್ ಆರಂಭಿಸಿದ್ದು, ತರಬೇತಿಯು ಮುಕ್ತಾಯ ಹಂತಕ್ಕೆ ತಲುಪಿದೆ. ಅದಕ್ಕಾಗಿ ಎರಡನೇ ಬ್ಯಾಚ್ ಆರಂಭಕ್ಕೆ ಇಲಾಖೆಯಿಂದ ಅರ್ಜಿ ಕರೆಯಲಾಗಿದ್ದು, ಊಹೆಗೂ ಮೀರಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಹಿಂದೆ ಅರ್ಜಿ ಸಲ್ಲಿಸುವಂತೆ ಯುವಕರ ಮನವೊಲಿಸಿದ್ದರೂ ಹಿಂದೇಟು ಹಾಕಿದ್ದು, ಇದೀಗ ಕೊಪ್ಪಳ ಜಿಲ್ಲೆಯಲ್ಲದೇ, ನೆರೆಯ ರಾಯಚೂರು, ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದು ಸಿಬ್ಬಂದಿ ವರ್ಗಕ್ಕೂ ಅಚ್ಚರಿ ಮೂಡಿಸಿದೆ. ಇದೀಗ 100 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.
ಮೊದಲ ಬ್ಯಾಚ್‌ನಲ್ಲಿ ಇಲ್ಲಿ ತರಬೇತಿ ಪಡೆದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಮೂಲದ ಯುವಕ ಬಳ್ಳಾರಿಯಲ್ಲಿ ನಡೆದ ರ‌್ಯಾಲಿಯಲ್ಲಿ ಭಾಗಿಯಾಗಿದ್ದು, ದೈಹಿಕ, ವೈದ್ಯಕೀಯ, ಸಿಇಟಿಯಲ್ಲಿ ತೇರ್ಗಡೆ ಹೊಂದಿದ್ದಾನೆ. ಸೇನೆಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇದು ದೈಹಿಕ ಹಾಗೂ ಲಿಖಿತ ಪಾಠ ತರಬೇತಿ ನೀಡಿದವರಿಗೆ ಸಂತಸ ಹೆಚ್ಚಿಸಿದೆ. ಇತರ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಸ್ಫೂರ್ತಿ ನೀಡಿದೆ.
ದೇಶ ಸೇವೆಗೆ ಯುವಕರು ಉತ್ಸುಕ
2ನೇ ಬ್ಯಾಚ್‌ಗೆ ಒಟ್ಟು 315 ಅರ್ಜಿಗಳು ಸಲ್ಲಿಕೆಯಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲ ದಾಖಲೆಗಳ ಪರಿಶೀಲನೆ ಬಳಿಕ 47 ಅರ್ಜಿಗಳು ತಿರಸ್ಕೃತಗೊಂಡಿದ್ದು, 268 ಅಭ್ಯರ್ಥಿಗಳ ಅರ್ಜಿಗಳು ಸ್ವೀಕೃತಗೊಂಡಿವೆ. ಫೆ.9ರಂದು ನಡೆದ ಆಯ್ಕೆ ರ‌್ಯಾಲಿಯಲ್ಲಿ 236 ಯುವಕರು ಬಂದಿರುವುದು ದೇಶ ಸೇವೆಗೆ ಸೇರಲು ಉತ್ಸುಕರಾಗಿರುವಂತೆ ಕಂಡುಬರುತ್ತಿದೆ.
ಬಳ್ಳಾರಿಯಲ್ಲಿ ನಡೆದ ವಿಭಾಗವಾರು ಸೇನಾ ರ‌್ಯಾಲಿಯಲ್ಲಿ ನಾನು ವಿಜಯನಗರ ಜಿಲ್ಲೆಯಿಂದ ಭಾಗಿಯಾಗಿ ಅಗ್ನಿವೀರ್‌ಗೆ ಎಲ್ಲದರಲ್ಲೂ ಉತ್ತೀರ್ಣನಾಗಿದ್ದೇನೆ. ನನ್ನ ಮೂಲ ದಾಖಲಾತಿಗಳನ್ನು ರ‌್ಯಾಲಿಯ ಅಧಿಕಾರಿಗಳು ಪಡೆದುಕೊಂಡಿದ್ದು, ಆಯ್ಕೆಪಟ್ಟಿಯಲ್ಲಿ ಹೆಸರು ಬರುವ ಭರವಸೆಯಿದೆ. ಎಸ್‌ಎಸ್‌ಸಿಜಿಡಿಗೆ ಇನ್ನಷ್ಟು ಪಾಠ ಬೋಧನೆ ಬೇಕಾಗಿದೆ.
ಕನಕಗಿರಿಯು ರಾಜ್ಯ ಮಟ್ಟದಲ್ಲಿ ಬೆಳೆಯಬೇಕೆಂಬುದು ನನ್ನ ಆಸೆ. ಅದಕ್ಕಾಗಿ ಕನಕಗಿರಿಗೆ ಸೇನಾ ಪೂರ್ವ ತರಬೇತಿ ಶಾಲೆ ತಂದಿದ್ದೆ. ಮೊದಲ ಬ್ಯಾಚ್‌ಗೆ ಅಭ್ಯರ್ಥಿಗಳಿರಲಿಲ್ಲ. ಆದರೆ, ಎರಡನೇ ಬ್ಯಾಚ್‌ಗೆ ನಿರೀಕ್ಷೆ ಮೀರಿ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿ, ರ‌್ಯಾಲಿಯಲ್ಲಿ ಪಾಲ್ಗೊಂಡಿರುವುದು ಸಂತಸ ಮೂಡಿಸಿದೆ.
2ನೇ ಬ್ಯಾಚ್‌ಗೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ನಿಯಮಾನುಸಾರ 100 ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುವುದು. ಕೆಲವರು ತೆರಬೇತಿ ನಡುವೆಯೇ ಬಿಟ್ಟು ಹೋಗುವುದರಿಂದ ನಂತರದ ಅಭ್ಯರ್ಥಿಗಳನ್ನು ರಿಸರ್ವ್ ಇಟ್ಟುಕೊಂಡು ಅವರಿಗೆ ಅವಕಾಶ ನೀಡಲಾಗುವುದು.