ಕುಷ್ಟಗಿ ತಾಲೂಕಿನ ಕೆ.ಹೊಸೂರು ಗ್ರಾಮದಿಂದ ಎಂ.ಗುಡದೂರು ಸಂಪರ್ಕಿಸುವ ಸಿಸಿ ರಸ್ತೆಯ ಮಧ್ಯ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿರುವುದು.
- ಮಾರ್ಗದುದ್ದಕ್ಕೂ ಕಾಣಿಸಿಕೊಂಡ ಬಿರುಕು
- ಮುಕ್ಕಾಲು ಕಿ.ಮೀ. ಉದ್ದದ ದಾರಿಗೆ 60ಲಕ್ಷ ರೂ. ವೆಚ್ಚ!
- 750ಮೀ. ರಸ್ತೆಗಷ್ಟೇ ಕಾಂಕ್ರಿಟ್
ವಿಜಯವಾಣಿ ವಿಶೇಷ ಕುಷ್ಟಗಿ: ತಾಲೂಕಿನ ಕೆ.ಹೊಸೂರು ಗ್ರಾಮದಿಂದ ಸುಕ್ಷೇತ್ರ ಎಂ.ಗುಡದೂರು ಗ್ರಾಮ ಸಂಪರ್ಕಿಸುವ ರಸ್ತೆಗೆ ಕಾಂಕ್ರಿಟ್(ಸಿಸಿ) ಹಾಕಿ ವರ್ಷವೂ ಕಳೆದಿಲ್ಲ. ಇಡೀ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ನಿರ್ಮಿಸಿ ಕೆಲವೇ ತಿಂಗಳಲ್ಲಿ ರಸ್ತೆ ಹಾಳಾಗಿರುವುದಕ್ಕೆ ಅನುಷ್ಠಾನ ಇಲಾಖೆ ವಿರುದ್ಧ ಅವಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆ.ಹೊಸೂರು ಗ್ರಾಮದಿಂದ ಎಂ.ಗುಡದೂರು ಗ್ರಾಮಕ್ಕೆ ಕೇವಲ ಎರಡು ಕಿಮೀ. ಅಂತರ ಇದೆ. ಎರಡೂ ಗ್ರಾಮಗಳ ಆರಂಭದಿಂದ ಅರ್ಧ ಕಿಮೀ.ನಷ್ಟು ಈಗಲೂ ಕಚ್ಚಾ ರಸ್ತೆಯೇ ಇದೆ. ರಸ್ತೆಯ ಮಧ್ಯದಲ್ಲಿ ಮುಕ್ಕಾಲು (750ಮೀ.) ನಷ್ಟು ರಸ್ತೆಗೆ ಕಾಂಕ್ರಿಟ್ ಹಾಕಿ ಸಿಸಿ ಕಾಮಗಾರಿ ಕೈಗೊಳ್ಳಲಾಗಿದೆ.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಕಾಮಗಾರಿ ಜವಾಬ್ದಾರಿ ಹೊತ್ತಿದೆ. ಕಾಮಗಾರಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯ 2023-24ನೇ ಸಾಲಿನ 60ಲಕ್ಷ ರೂ. ಅನುದಾನ ವೆಚ್ಚ ಮಾಡಿರುವುದಾಗಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಕಾಮಗಾರಿ ಪೂರ್ಣಗೊಂಡು 7ತಿಂಗಳಷ್ಟೆ ಕಳೆದಿದೆ. ಆಗಲೇ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡು ಸಂಚಾರ ಯೋಗ್ಯವಿಲ್ಲದಂತಾಗಿದೆ.
ರಸ್ತೆಯ ಮಧ್ಯ ಭಾಗದಲ್ಲಿ ಕಾಣಿಸಿಕೊಂಡ ಬಿರುಕು ರಸ್ತೆಯನ್ನು ಛೇದಿಸಿದೆ. ಅಲ್ಲಲ್ಲಿ ಕಾಂಕ್ರಿಟ್ ಕಿತ್ತು ಹೋಗಿ ಗುಂಡಿಗಳು ನಿರ್ಮಾಣಗೊಂಡು ಅಪಾಯದ ಮುನ್ಸೂಚಕವಾಗಿದೆ. ರಸ್ತೆಯ ಅಕ್ಕ-ಪಕ್ಕದ ಜಮೀನುಗಳಲ್ಲಿನ ಮಳೆ ನೀರು ಸಾಗಲು ರಸ್ತೆ ಅಡಿ ಪೈಪ್ ಅಳವಡಿಸದಿರುವುದು ಜಮೀನುಗಳಲ್ಲಿ ನೀರು ಸಂಗ್ರಹಗೊಳ್ಳುತ್ತಿದೆ.
ಭ್ರಮನಿರಸನ!
ಸುಕ್ಷೇತ್ರ ಎಂ.ಗುಡದೂರು ಗ್ರಾಮದಲ್ಲಿ ಧಾರ್ಮಿಕ ಹಿನ್ನೆಲೆ ಇರುವ ಶ್ರೀ ದೊಡ್ಡಬಸವಾರ್ಯರ ಮಠವಿದೆ. ಪ್ರತಿ ಅಮಾವಾಸ್ಯೆ ಹಾಗೂ ಜಾತ್ರೆ ಸಂದರ್ಭದಲ್ಲಿ ಸಾವಿರಾರು ಭಕ್ತರು ಮಠಕ್ಕೆ ಬಂದು ಹೋಗುತ್ತಾರೆ. ಕೆ.ಹೊಸೂರು ಗ್ರಾಮ ಸೇರಿದಂತೆ ಅಕ್ಕ-ಪಕ್ಕದ ಕೆ.ಗೋನಾಳ, ಕೆ.ಬಸಾಪುರ, ತೆಗ್ಗಿಹಾಳ ಇತರ ಗ್ರಾಮಗಳ ಭಕ್ತರು ಇದೇ ರಸ್ತೆ ಅವಲಂಬಿಸಿದ್ದಾರೆ. ರಸ್ತೆ ಹಾಳಾಗಿದ್ದರಿಂದ ಟೆಂಗುಂಟಿ ಮಾರ್ಗವಾಗಿ ಸಂಚರಿಸುತ್ತಿದ್ದ ಗ್ರಾಮಸ್ಥರಿಗೆ ಸಿಸಿ ರಸ್ತೆ ನಿರ್ಮಿಸಿದ್ದು ಹರ್ಷವನ್ನುಂಟು ಮಾಡಿತ್ತು. ಆದರೆ ಕಳಪೆ ಕಾಮಗಾರಿ ನಿರಾಶೆಯನ್ನುಂಟು ಮಾಡಿದೆ.
ಗ್ರಾಮದಿಂದ ಹೊಸೂರು ಗ್ರಾಮಕ್ಕೆ ಸಿಸಿ ರಸ್ತೆ ನಿರ್ಮಿಸಲಾಗಿದೆ. ಯರಿ(ಕಪ್ಪು) ಮಣ್ಣಿನ ಮೇಲೆ ರಸ್ತೆ ಅಗೆಯದೆ ನೇರ ಕಾಂಕ್ರಿಟ್ ಹಾಕಲಾಗಿದೆ. ಕೇವಲ ಏಳೇ ತಿಂಗಳಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಲ್ಲಲ್ಲಿ ಕಾಂಕ್ರಿಟ್ ಕಿತ್ತು ಹೋಗಿದೆ. ಅಪರಿಚಿತ ವಾಹನಗಳಿಗೆ ಅಪಾಯದ ಮುನ್ಸೂಚಕವಾಗಿದೆ. ಜಮೀನುಗಳಲ್ಲಿನ ಮಳೆ ನೀರು ಸಾಗಿಸಲು ರಸ್ತೆ ಕೆಳಗೆ ಪೈಪ್ ಅಳವಡಿಸಿಲ್ಲ. ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಕುರಿತು ಪ್ರಶ್ನಿಸಿದರೆ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ.
ಕೆ.ಹೊಸೂರು ಗ್ರಾಮದಿಂದ ಎಂ.ಗುಡದೂರು ಸಂಪರ್ಕಿಸುವ ರಸ್ತೆಗೆ 750ಮೀ. ಉದ್ದಕ್ಕೆ ಸಿಸಿ ನಿರ್ಮಿಸಲಾಗಿದೆ. ರಸ್ತೆಯ ಎರಡೂ ಬದಿ ಮರಮ್ ಹಾಕಬೇಕಿತ್ತು. ಅಕ್ಕ-ಪಕ್ಕದ ಜಮೀನುಗಳ ರೈತರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹಾಗೆಯೇ ಬಿಡಲಾಗಿದೆ. ಈ ಕಾರಣದಿಂದಲೇ ರಸ್ತೆ ಮಧ್ಯೆ ಬಿರುಕು ಕಾಣಿಸಿಕೊಂಡಿರಬಹುದು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು.