ಗಂಗಾವತಿ ಗ್ರಾಮದೇವತೆ ಶ್ರೀದುರ್ಗಾದೇವಿ ಜಾತ್ರಾಮಹೋತ್ಸವಕ್ಕಾಗಿ ಸಿದ್ಧಪಡಿಸಿರುವ ಪರಿಸರ ಸ್ನೇಹಿ ಧ್ವಜ, ಬ್ಯಾನರ್ ಮತ್ತು ಶಾಲುಗಳನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಶುಕ್ರವಾರ ಬಿಡುಗಡೆಗೊಳಿಸಿದರು. ಮಾಜಿ ಸಚಿವ ಎಂ.ಮಲ್ಲಿಕಾರ್ಜುನನಾಗಪ್ಪ, ಮಾಜಿ ಶಾಸಕ ಜಿ.ವೀರಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಇತರರಿದ್ದರು. 
ಕೊಪ್ಪಳ

ಧರ್ಮ ಜಾಗೃತಿ-ನಗರಾಭಿವೃದ್ಧಿ ಆದ್ಯತೆಯಾಗಲಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಎಚ್.ಜಿ.ರಾಮುಲು ಸಲಹೆ
  • ವಿವಿಧ ಸಮಾಜದ ಮುಖಂಡರು-ಅಧಿಕಾರಿಗಳ ಸಭೆ
  • ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ
ಗಂಗಾವತಿ: ನಗರದ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವನ್ನು ಸರ್ವ ಸಮುದಾಯದ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದು ಮಾಜಿ ಸಂಸದ ಎಚ್.ಜಿ.ರಾಮುಲು ತಿಳಿಸಿದರು.
ನಗರದ ಶ್ರೀ ದುರ್ಗಾದೇವಿ ಸಭಾಂಗಣದಲ್ಲಿ ಜಾತ್ರಾಮಹೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ಸಮಾಜದ ಮುಖಂಡರು ಮತ್ತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಧರ್ಮ ಜಾಗೃತಿ ಜತೆಗೆ ನಗರದ ಅಭಿವೃದ್ಧಿಗೆ ಮುಖಂಡರು ಆದ್ಯತೆ ನೀಡಬೇಕಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಶ್ರೀದುರ್ಗಾದೇವಿ ದೇವಾಲಯ ಸಮಿತಿಗಿದೆ. ನಾಲ್ಕು ದಿನ ಜರುಗಲಿರುವ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ವ್ಯವಸ್ಥೆ ಗೊಳಿಸಲಾಗಿದ್ದು, ಎಲ್ಲ ಸಮುದಾಯದವರು ಭಾಗವಹಿಸುವಂತೆ ಸಲಹೆ ನೀಡಿದರು.
ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಬಳ್ಳಾರಿ ಶ್ರೀ ಕನಕದುರ್ಗಮ್ಮ ದೇವಿ ದೇವಾಲಯ ಬಳಿ ನಿರ್ಮಿಸಿರುವ ಮಹಿಷ ಮರ್ದಿನಿ ಕಂಚಿನ ಮೂರ್ತಿ ಮಾದರಿಯನ್ನು ಗಂಗಾವತಿಯಲ್ಲೂ ನಿರ್ಮಿಸಲಾಗುವುದು. ಜಾತ್ರಾಮಹೋತ್ಸವಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಎಲ್ಲ ರೀತಿಯಲ್ಲಿ ಸಹಕಾರ ನೀಡುವಂತೆ ತಿಳಿಸಿದರು.
ಮೂರು ವರ್ಷಕ್ಕೊಮ್ಮೆ ಜರುಗುವ ಜಾತ್ರಾಮಹೋತ್ಸವ ಕುರಿತು ದೇವಾಲಯ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಮಾತನಾಡಿದರು. ಮಾಜಿ ಸಚಿವರಾದ ಬಿ. ಶ್ರೀರಾಮುಲು, ಎಂ.ಮಲ್ಲಿಕಾರ್ಜುನನಾಗಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ತಹಸೀಲ್ದಾರ್ ಯು.ನಾಗರಾಜ್, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಇತರರಿದ್ದರು.

ಡಿ.18ರಿಂದ ಶ್ರೀ ದುರ್ಗಾದೇವಿ ಜಾತ್ರೆ

ಡಿ.18ರಿಂದ 21ರವರೆಗೆ ಜರುಗಲಿರುವ ಜಾತ್ರಾಮಹೋತ್ಸವದಲ್ಲಿ ನಗರದ 64 ಸಮಾಜದ ಮುಖಂಡರು ಭಾಗವಹಿಸಲಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ನಗರದ ಪ್ರತಿ ಮನೆಗಳನ್ನು ವಿದ್ಯುತ್ ದೀಪಗಳು ಮತ್ತು ರಂಗೋಲಿಯೊಂದಿಗೆ ಸಿಂಗರಿಸಬೇಕು. ಈಗಾಗಲೇ ಎಲ್ಲ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿದ್ದು, ಅದ್ದೂರಿ ಮತ್ತು ಅರ್ಥಪೂರ್ಣ ವ್ಯವಸ್ಥೆಗೆ ಸಹಕರಿಸುವ ಭರವಸೆ ನೀಡಿದ್ದಾರೆ ಎಂದು ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ತಿಳಿಸಿದರು.

ಪರಿಸರ ಸ್ನೇಹಿ ಧ್ವಜ ಬಿಡುಗಡೆ

ಮೂರು ವರ್ಷಕ್ಕೊಮ್ಮೆ ಜರುಗಲಿರುವ ಶ್ರೀದುರ್ಗಾದೇವಿ ಜಾತ್ರಾಮಹೋತ್ಸವಕ್ಕಾಗಿ ಸಿದ್ಧಪಡಿಸಿರುವ ಪರಿಸರ ಸ್ನೇಹಿ ಧ್ವಜ, ಬ್ಯಾನರ್ ಮತ್ತು ಶಾಲುಗಳನ್ನು ಬಿಡುಗಡೆಗೊಳಿಸಲಾಯಿತು. ಜಾತ್ರಾಮಹೋತ್ಸವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ಅದ್ದೂರಿ ಆಚರಣೆಗೆ ಗಮನಹರಿಸಬೇಕಿದ್ದು, ಮನೆಯ ಹಬ್ಬದಂತೆ ಸಂಭ್ರಮಿಸೋಣ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
"

ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವನ್ನು ಕಾನೂನು ಚೌಕಟ್ಟಿನಲ್ಲಿ ಆಚರಿಸಬೇಕಿದ್ದು, ಎಲ್ಲ ಸಮುದಾಯದವರ ವಿಶ್ವಾಸದೊಂದಿಗೆ ಅದ್ದೂರಿಯಾಗಿ ಆಚರಿಸಲಾಗುವುದು.