ಬ್ಲಾಕ್​ ಕಾಂಗ್ರೆಸ್​ ಪದಾಧಿಕಾರಿಗಳು ಸಲ್ಲಿಸಿದ ಸಾಮೂಹಿಕ ರಾಜೀನಾಮೆ ಪತ್ರ. 
ಕೊಪ್ಪಳ

ಕಾಂಗ್ರೆಸ್​ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆ

ಪ್ರಮುಖ ಮುಖ್ಯಾಂಶಗಳು

  • ಹಿಟ್ನಾಳಗೆ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಅಸಮಾಧಾನ

ಕೊಪ್ಪಳ : ಶಾಸಕ ರಾವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಜಿಲ್ಲಾ ಕಾಂಗ್ರೆಸ್​ ಮಹಿಳಾ ಅಧ್ಯೆ, ಬ್ಲಾಕ್​ ಕಾಂಗ್ರೆಸ್​, ತಾಲೂಕು ಯುವ ಕಾಂಗ್ರೆಸ್​ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸುವ ಮೂಲಕ ಹೈಕಮಾಂಡ್​ಗೆ ಬಿಸಿ ಮುಟ್ಟಿಸಿದ್ದಾರೆ.

ಸತತ ಎರಡು ತಿಂಗಳ ಕಾಲ ನಡೆದ ಕ್ಯಾಬಿನೆಟ್​ ವಿಸ್ತರಣೆ ಕಸರತ್ತು ಸೋಮವಾರವಷ್ಟೇ ಮುಗಿದಿದೆ. ಆದರೆ, ಮಂತ್ರಿಭಾಗ್ಯದಿಂದ ವಂಚಿತರಾದ ಶಾಸಕರು, ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಕೊಪ್ಪಳ ಶಾಸಕ ರಾವೇಂದ್ರ ಹಿಟ್ನಾಳಗೆ ಸಚಿವಗಿರಿ ತಪ್ಪಿದ್ದಕ್ಕೆ ಪ್ರತಿಭಟಿಸಿದ್ದ ಕಾರ್ಯಕರ್ತರು ಮಂಳಗಳವಾರ ರಾಜೀನಾಮೆ ದಾಳ ಉರುಳಿಸಿದ್ದಾರೆ. ಮಹಿಳಾ, ಗ್ರಾಮೀಣ ಬ್ಲಾಕ್​, ತಾಲೂಕು ಯುವ ಕಾಂಗ್ರೆಸ್​ ಸಮಿತಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಮಹಿಳಾ ಕಾಂಗ್ರೆಸ್​ ಜಿಲ್ಲಾಧ್ಯೆ ಜ್ಯೋತಿ ಗೊಂಡಬಾಳ, ಗ್ರಾಮೀಣ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೃಷ್ಣಾರೆಡ್ಡಿ ಗಲಬಿ, ಉಪಾಧ್ಯಕ್ಷರಾದ ಚಾಂದಪಾಷಾ ಕಿಲ್ಲೇದಾರ, ಗವಿಸಿದ್ದನಗೌಡ ಪಾಟೀಲ್​, ರವಿಯಯ್ಯ ಕೊಪ್ಪಳ, ಪ್ರ.ಕಾ.ಶಂಕರ್​ ಅಗಳಕೇರಾ, ಕಾರ್ಯದರ್ಶಿ ಹನುಮಂತ ಮತ್ತೂರು, ಖಜಾಂಚಿ ಧರ್ಮರಾಜ ಹಿಟ್ನಾಳ, ಕೊಪ್ಪಳ ತಾಲೂಕು ಯುವ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಸಂತೋಷ ದೊಡ್ಡಮನಿ, ಉಪಾಧ್ಯಕ್ಷ ಸಂತೋಷ ಕುರಿ, ಪ್ರ.ಕಾ. ಬಸವರಾಜ ಬೂದಗುಂಪಾ, ಪದಾಧಿಕಾರಿಗಳಾದ ಶಿವಮೂರ್ತಿ ಮೂಲಿಮನಿ, ಚಂದ್ರಪ್ಪ ನಾಯಕ, ನಿಂಗಪ್ಪ ತಳಕಲ್​ ಹುದ್ದೆ ತೊರೆದಿದ್ದಾರೆ.
ಹಿಟ್ನಾಳ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕುರುಬ ಸಮುದಾಯ ಪ್ರತಿನಿಧಿಸುತ್ತಿದ್ದಾರೆ. ಸತತ ಮೂರು ಬಾರಿ ಗೆದ್ದಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ್ದು ಮಂತ್ರಿ ಸ್ಥಾನ ನೀಡಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಕೊಪ್ಪಳ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ನಮ್ಮ ಶಾಸಕರಿಗೆ ಸಚಿವಗಿರಿ ನೀಡದಿರುವುದು ಮನಸ್ಸಿಗೆ ನೋವು ತಂದಿದ್ದು ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.