ಕೊಪ್ಪಳ ತಾಲೂಕಿನ ಕುಟಗನಳ್ಳಿ ಗ್ರಾಮದಲ್ಲಿ ಸೋಮವಾರ ಸಾವಿರಾರು ಜನರು ಅಸ್ತಮಾ ರೋಗಕ್ಕೆ ಸಾಮೂಹಿಕ ಔಷಧ ಸೇವನೆ ಮಾಡಿದರು.  
ಕೊಪ್ಪಳ

ಅಸ್ತಮಾಕ್ಕೆ ಸಾಮೂಹಿಕ ಔಷಧ ಸೇವನೆ

ಪ್ರಮುಖ ಮುಖ್ಯಾಂಶಗಳು

  • ಕುಟಗನಳ್ಳಿಯಲ್ಲಿ ಗುಳಿಗೆ ಪಡೆದ ಸಾವಿರಾರು ಜನ
ಕೊಪ್ಪಳ : ತಾಲೂಕಿನ ಕುಟಗನಳ್ಳಿ ಗ್ರಾಮದಲ್ಲಿ ಸೋಮವಾರ ರಾಜ್ಯ&ಹೊರ ರಾಜ್ಯದಿಂದ ಬಂದಿದ್ದ ಸಾವಿರಾರು ಜನರು ಅಸ್ತಮಾ ರೋಗಕ್ಕೆ ಸಾಮೂಹಿಕ ಔಷಧ ಸೇವಿಸಿದರು.
ಪ್ರತಿ ವರ್ಷದಂತೆ ಮೃಗಶಿರ ಮಳೆ ನಕ್ಷತ್ರ ಸೇರುವ ಸಂಧಿ ಕಾಲದಲ್ಲಿ ಔಷಧ ಸೇವನೆ ಮಾಡಿದ್ದು ಕಂಡುಬಂತು. ಗ್ರಾಮದ ಅಶೋಕರಾವ್​ ಕುಲಕರ್ಣಿ ಕುಟುಂಬದ ಹಲವು ದಶಗಳಿಂದ ಉಚಿತ ಔಷಧ ವಿತರಣೆ ಮಾಡುತ್ತಿದೆ. ಅಸ್ತಾಮಾ, ದಮ್ಮು, ಕೆಮ್ಮು ಸಮಸ್ಯೆ ಇರುವವರು ಮೃಗಶಿರ ಮಳೆ ನಕ್ಷತ್ರ ಕೂಡುವಾಗ ಸತತ ಮೂರು ವರ್ಷ ಔಷಧ ಸೇವಿಸಿದಲ್ಲಿ ರೋಗ ಸಂಪೂರ್ಣ ನಿವಾರಣೆ ಆಗಲಿದೆ ಎಂಬ ನಂಬಿಕೆ ಇದೆ. ಈ ವರ್ಷ ಸೋಮವಾರ ರಾತ್ರಿ 7.39 ಗಂಟೆಗೆ ಮಳೆ ನಕ್ಷತ್ರ ಸಂಧಿಸಿದ್ದು, ಅದೇ ಸಮಯಕ್ಕೆ ಸರಿಯಾಗಿ ಜನ ಔಷಧ ಪಡೆದರು.
ರಾಜ್ಯದ ವಿವಿಧ ಜಿಲ್ಲೆ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಗೋವಾ, ತಮಿಳು ನಾಡು ಸೇರಿ ವಿವಿಧೆಡೆಯಿಂದ ಸಾವಿರಾರು ಜನರು ಭಾನುವಾರದಿಂದಲೇ ಕುಟಗನಳ್ಳಿಗೆ ಆಗಮಿಸಿದ್ದು ಕಂಡುಬಂತು. ಭಾನುವಾರ ರಾತ್ರಿಯಿಂದಲೇ ಮಳೆ ಚುರುಕು ಪಡೆದಿದ್ದು, ಸೋಮವಾರವೂ ಆಗಾಗ ವರುಣ ದರ್ಶನ ನೀಡಿದ. ಮಕ್ಕಳು, ವೃದ್ಧರು, ಮಹಿಳೆ, ಯುವಕರು ಎಲ್ಲ ವಯೋಮಾನದವರು ಔಷಧ ಸೇವಿಸಿದ್ದು ಕಂಡುಬಂತು. ಬಂದವರಿಗೆ ಸ್ವಯಂ ಸೇವಕರು ಉಪಾಹಾರ ವ್ಯವಸ್ಥೆ ಕಲ್ಪಿಸಿದರು.
ಹೆಚ್ಚು ಜನ ಸೇರುವ ಕಾರಣ ಭದ್ರತೆ ಬಿಗಿಗೊಳಿಸಿದ್ದ ಪೊಲೀಸರು ಜನರು ಕುಲಕರ್ಣಿ ಅವರ ಮನೆ ಕಡೆಗೆ ಹೆಚ್ಚು ಜನ ಸೇರದಂತೆ ನೋಡಿಕೊಂಡರು. ಜನರು ಇರುವಲ್ಲಿಯೇ ಪೊಲೀಸರು, ಸ್ವಯಂ ಸೇವಕರು ಔಷಧ ತಂದು ಹಂಚಿದರು. ನಕ್ಷತ್ರ ಸಂಧಿಸುವ ವೇಳೆಗೆ ಎಲ್ಲರಿಗೂ ಸೂಚನೆ ನೀಡಿ ಏಕಕಾಲಕ್ಕೆ ಔಷಧ ಸೇವಿಸುವಂತೆ ನೋಡಿಕೊಂಡರು. ಮೊಬೈಲ್​, ವಾಚ್​ನಲ್ಲಿ ಸಮಯ ನೋಡುತ್ತ ಕಾದಿದ್ದ ಜನರು ಸರಿಯಾದ ಸಮಯಕ್ಕೆ ಔಷಧ ಸೇವಿಸಿದರು. ದೂರದೂರಿನಿಂದ ಬಂದ ಕೆಲವರು ಗುಳಿಗೆ ತೆಗೆದುಕೊಂಡು ತೆರಳಿ ಸರಿಯಾದ ಸಮಯಕ್ಕೆ ಇದ್ದಲ್ಲೇ ಸೇವಿಸಿದರು.

ಔಷಧ ಹಿನ್ನೆಲೆ

ಹಲವು ವರ್ಷಗಳ ಹಿಂದೆ ಅಶೋಕ ಕುಲಕರ್ಣಿ ಅವರ ತಂದೆ ವ್ಯಾಸರಾವ್​ ಕುಲಕರ್ಣಿ ಔಷಧ ವಿತರಣೆ ಆರಂಭಿಸಿದರು. ಅವರ ಕುಟುಂಬದವರು ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ವಿವಿಧ ಗಿಡಮೂಲಿಕೆ ಹಾಗೂ ಹಳೇ ಬೆಲ್ಲ ಬಳಸಿ ಔಷಧ ತಯಾರಿಸಲಾಗುತ್ತದೆ. ವೃತ್ತಾಕಾರದಲ್ಲಿ ಗುಳಿಗೆ ಮಾಡಿ ವಿತರಿಸಲಾಯಿತು. ಔಷಧ ಸೇವನೆ ಬಳಿಕ ಜನರು ಏಕಕಾಲಕ್ಕೆ ಗ್ರಾಮದಿಂದ ತೆರಳಿದ್ದರಿಂದ ಟ್ರಾಫಿಕ್​ ಜಾಮ್​ ಕಂಡುಬಂತು. ಜನರ ನಿಯಂತ್ರಣಕ್ಕಾಗಿ ಅಗತ್ಯ ಪೊಲೀಸ್​ ಭಧ್ರತೆ ಕಲ್ಪಿಸಲಾಗಿತ್ತು. ವಾಹನಗಳ ಪಾರ್ಕಿಂಗ್​ಗೆ ಜಮೀನುಗಳಲ್ಲಿ ಜಾಗ ಕಲ್ಪಿಸಿಕೊಡುವ ಮೂಲಕ ಜನದಟ್ಟಣೆ ನಿಯಂತ್ರಿಸಲಾಯಿತು.