ಕೊಪ್ಪಳದ ಅರುಣ ಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಡಿಸಿ ಡಾ.ಸುರೇಶ ಬಿ.ಇಟ್ನಾಳ ಉದ್ಘಾಟಿಸಿದರು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟೇಶ್ ದೇಶಪಾಂಡೆ, ಡಾ.ಕೆ.ಜಿ.ಕುಲಕರ್ಣಿ, ಡಾ.ರಾಧಾ ಕುಲಕರ್ಣಿ, ಅರುಣಚೇತನ ಶಾಲಾ ಸಮಿತಿ ಅಧ್ಯಕ್ಷ ಅನಂತ ಇನಾಂದಾರ್, ಅನಿಲ್ ನಾಲವಾಡ ಇದ್ದರು.
- ಡಿಸಿ ಡಾ.ಸುರೇಶ ಬಿ.ಇಟ್ನಾಳ ಸಲಹೆ
ಕೊಪ್ಪಳ : ವಿಕಲಾಂಗ ಮಕ್ಕಳು ಸರ್ಕಾರ ಹಾಗೂ ಸಂಘ-ಸಂಸ್ಥೆಗಳ ಮೂಲಕ ಇರುವ ಸೌಲಭ್ಯಗಳ ಸದುಪಯೋಗ ಪಡೆಯಿರಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸಲಹೆ ನೀಡಿದರು.
ನಗರದ ಅರುಣ ಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೊದಲ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
21 ಬಗೆಯ ಅಂಗವಿಕಲರಿದ್ದಾರೆ. ಅರುಣಚೇತನ ವಿಶೇಷ ಮಕ್ಕಳ ಶಾಲೆ ವಿಕಲಾಂಗ ಮಕ್ಕಳಿಗೆ ಅಗತ್ಯ ಪುನಃಶ್ಚೇತನ ಸೌಲಭ್ಯ ದೊರಕಿಸುತ್ತಿದೆ. ಜಿಲ್ಲಾಡಳಿತದಿಂದ ಶೀಘ್ರದಲ್ಲೇ ಅಂಗವಿಕಲ ಮಕ್ಕಳ ಪುನಃಶ್ಚೇತನಕ್ಕಾಗಿ ಆರಂಭಿಕ ಮಧ್ಯಸ್ಥಿಕೆ ಕೇಂದ್ರ ಪ್ರಾರಂಭಿಸಲಾಗುವುದು. ಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಶಾಲಾ ಸಮಿತಿ ಕಾರ್ಯದರ್ಶಿ ರೇಣುಕಾ ಮಾತನಾಡಿ, ಬೆಂಗಳೂರಿನಲ್ಲಿ ನಮ್ಮ ಸಂಸ್ಥೆ 39 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಕೊಪ್ಪಳದಲ್ಲಿ ಏಳನೆ ಶಾಲೆ ಆರಂಭಿಸಿದ್ದೇವೆ. ಸೇವಾ ಮನೋಭಾವ ಇರುವವರ ಸಹಕಾರದಿಂದ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿದೆ. 30 ಮಕ್ಕಳು ಕಲಿಯುತ್ತಿದ್ದಾರೆ. ಫಿಸಿಯೋಥೆರಪಿ, ವಿಶೇಷ ಶಿಕ್ಷಣ, ಸಾಧನ ಸಲಕರಣೆಗಳ ಜತೆಗೆ ಶಾಲಾ ವಾಹನ ಸೌಲಭ್ಯವಿದೆ. ದಾನಿಗಳು ಪ್ರಾಯೋಜಕತ್ವ ತೆಗೆದುಕೊಂಡರೆ ಸೇವೆ ವಿಸ್ತರಿಸಲು ಸಹಕಾರಿಯಾಗಲಿದೆ ಎಂದರು.
ಮಹಾತ್ಮಾ ಗಾಂಧಿ ಅನಾಥ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಜೈನ್ ಮಾತನಾಡಿದರು. ಆರೈಕೆದಾರರು ಅಭಿಪ್ರಾಯ ಹಂಚಿಕೊಂಡರು. ವಿಕಲಾಂಗ ಮಕ್ಕಳಿಂದ ನಡೆದ ಯೋಗ ಮತ್ತು ನೃತ್ಯ ಗಮನ ಸೆಳೆದವು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟೇಶ್ ದೇಶಪಾಂಡೆ, ಡಾ.ಕೆ.ಜಿ.ಕುಲಕರ್ಣಿ, ಡಾ.ರಾಧಾ ಕುಲಕರ್ಣಿ, ಅರುಣಚೇತನ ಶಾಲಾ ಸಮಿತಿ ಅಧ್ಯಕ್ಷ ಅನಂತ ಇನಾಂದಾರ್, ಅನಿಲ್ ನಾಲವಾಡ ಇತರರಿದ್ದರು.