ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ಗಂಗಾವತಿಯಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್, ಪದಾಧಿಕಾರಿಗಳಾದ ಫಕೀರಪ್ಪ, ದಾವಲಸಾಬ್, ನೂರಪಾಷಾ, ಪಾರ್ವತಿ, ಶೇಖರ, ಶಾಂತಮ್ಮ, ಹನುಮಂತ ಇತರರಿದ್ದರು.
- ಗಂಗಾವತಿಯಲ್ಲಿ ಪ್ರತಿಭಟನೆ
- ಕನಿಷ್ಠ ವೇತನ ಜಾರಿಗೊಳಿಸಲು ಒತ್ತಾಯ
ಗಂಗಾವತಿ: ಕನಿಷ್ಠ ವೇತನ ಜಾರಿ ಹಾಗೂ ಸೇವೆ ಕಾಯಂಗೊಳಿಸಲು ಒತ್ತಾಯಿಸಿ ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ಪಂಗಡಗಳ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಬರುವ ವಸತಿ ಶಾಲೆಗಳಲ್ಲಿ ಕಳೆದ 15-20 ವರ್ಷಗಳಿಂದ ಕಡಿಮೆ ವೇತನಕ್ಕೆ ಹೆಚ್ಚಿನ ಅವಧಿ ಕೆಲಸ ಮಾಡಲಾಗುತ್ತಿದೆ. ಇತ್ತೀಚೆಗೆ ವೇತನ ಪರಿಷ್ಕರಿಸಿದರೂ ಅದು ಇನ್ನೂ ಜಾರಿಯಾಗಿಲ್ಲ. ಯಾವುದೇ ಉದ್ಯೋಗ ಭದ್ರತೆಯಿಲ್ಲದೆ ದುಡಿಯುತ್ತಿದ್ದು, ಮೇಲ್ವಿಚಾರಕರ ಶೋಷಣೆಗೆ ಒಳಗಾಗುತ್ತಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಸಿಬ್ಬಂದಿಯನ್ನು ವಜಾಗೊಳಿಸುತ್ತಿರುವುದರಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಆರೋಪಿಸಿದರು.
ಎಲ್ಲ ಸಿಬ್ಬಂದಿಗೆ ಉದ್ಯೋಗ ಭದ್ರತೆ ಒದಗಿಸುವುದರ ಜತೆಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಇಲಾಖೆಯಿಂದಲೇ ನೇರ ವೇತನ ಪಾವತಿಯಾಗಬೇಕು. ಇದರೊಂದಿಗೆ ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐಡಿ ಕಾರ್ಡ್, ಸೇವಾ ಪ್ರಮಾಣ ಪತ್ರ, ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಕಲ್ಪಿಸಬೇಕು. ವಾರಕ್ಕೊಮ್ಮೆ ಕಡ್ಡಾಯ ರಜೆ, ಕೆಲಸದ ನಿರ್ದಿಷ್ಟ ಸಮಯ ನಿಗದಿ, ಅಪಘಾತ ಚಿಕಿತ್ಸೆ ಮತ್ತು ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪದಾಧಿಕಾರಿಗಳಾದ ಫಕೀರಪ್ಪ, ದಾವಲ್ಸಾಬ್, ನೂರಪಾಷಾ, ಮಂಜುನಾಥ, ಪಾರ್ವತಿ, ಶೇಖರ, ಶಾಂತಮ್ಮ, ಹನುಮಂತ, ರಮೇಶ, ಆನಂದ, ರೇಖಾ, ಗಂಗೇಶ, ಸೋಮಣ್ಣ ಅಡವಿ, ವೆಂಕಟೇಶ, ರಾಧಾ, ಶಿವು, ದುರುಗಮ್ಮ, ಶಾರದಾ, ಲಕ್ಷ್ಮಿ ಇತರರಿದ್ದರು.