ಕೊಪ್ಪಳದಲ್ಲಿ ಶುಕ್ರವಾರ ನಗರದ ಎಲ್ಲಾ ಚಿಕ್ಕಪುಟ್ಟ ಬೀದಿಬದಿ ವ್ಯಾಪಾರಿಗಳು ಡಿಸಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಕೊಪ್ಪಳ :ನಗರ ವ್ಯಾಪ್ತಿಯಲ್ಲಿ ದಶಕಗಳಿಂದ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿರುವ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಲು ನಗರಸಭೆ ನೀಡಿರುವ ನೋಟಿಸ್ ಈಗ ನೂರಾರು ಕುಟುಂಬಗಳಲ್ಲಿ ಆತಂಕ ಮೂಡಿಸಿದೆ. ಮೊದಲು ನಮಗೆ ಪರ್ಯಾಯ ವ್ಯವಸ್ಥೆ ಮಾಡಿ, ಆಮೇಲೆ ತೆರವು ಮಾಡಿ ಎಂದು ಚಿಕ್ಕಪುಟ್ಟ ಬೀದಿಬದಿ ವ್ಯಾಪಾರಸ್ಥರ ಹಿತರಕ್ಷಣಾ ಸಂಘದ ಅಧ್ಯಕ್ಷ ರಹಮತ್ ಉಲ್ಲಾ ಶಬ್ಬೀರ್ ಆಗ್ರಹಿಸಿದರು.
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ನಗರದ ಎಲ್ಲಾ ಬೀದಿಬದಿ ವ್ಯಾಪಾರಿಗಳು ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಳೆದ ಜ. 19 ರಂದು ನಗರಸಭೆಯು ಏಕಾಏಕಿ ಅಂಗಡಿ ತೆರವುಗೊಳಿಸುವಂತೆ ನೋಟಿಸ್ ನೀಡಿದೆ. ಇದರಿಂದ ಕಳೆದ 30-&40 ವರ್ಷಗಳಿಂದ ಇದೇ ವೃತ್ತಿಯನ್ನು ನಂಬಿಕೊಂಡಿರುವ ವ್ಯಾಪಾರಿಗಳ ಬದುಕು ಅಯೋಮಯವಾಗಿದೆ. ಅನೇಕರು ನಗರಸಭೆಯ ಮೂಲಕವೇ ಸಾಲ ಪಡೆದು ವ್ಯಾಪಾರ ಮಾಡುತ್ತಿದ್ದು, ಈಗ ಅವರ ಬದುಕು ಆತಂಕದ ಸ್ಥಿಯಲ್ಲಿದೆ ಎಂದರು.
ಈ ಹಿಂದೆ ಸಾಹಿತ್ಯ ಭವನ ಮತ್ತು ಕಣ್ಣಿನ ಆಸ್ಪತ್ರೆ ನಿಮಾರ್ಣದ ಸಂದರ್ಭದಲ್ಲಿ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆ ಸಮಯದಲ್ಲಿ ಅಂದಿನ ಶಾಸಕ ದಿವಂಗತ ಮಲ್ಲಿಕಾರ್ಜುನ ದಿವಟರ್ ಮತ್ತು ಮಾಜಿ ಸಂಸದ ಎಚ್.ಜಿ.ರಾಮುಲು ಅವರು ಹೊಸ ಬಸ್ ನಿಲ್ದಾಣ ಹಾಗೂ ಜೆ.ಪಿ.ಮಾರ್ಕೆಟ್ ಬಳಿ ಸೂಕ್ತ ಸ್ಥಳಾವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆಗಳು ವರ್ಷಗಳು ಕಳೆದರೂ ಇನ್ನೂ ಕಾಗದದ ಮೇಲೆಯೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀಡಿರುವ ತೆರವು ನೋಟಿಸ್ ಅನ್ನು ಕೂಡಲೇ ಹಿಂಪಡೆಯಬೇಕು, ನಗರದ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಲು ಸುಸಜ್ಜಿತವಾದ ಪರ್ಯಾಯ ಸ್ಥಳ ಗುರುತಿಸಬೇಕು, ಬೀದಿಬದಿ ವ್ಯಾಪಾರಿಗಳ ಜೀವನಕ್ಕೆ ಆಸರೆಯಾಗುವಂತಹ ಶಾಶ್ವತ ಯೋಜನೆ ಜಾರಿಗೆ ತರಬೇಕು ಎಂದು ಮನವಿ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ಜಮಲ್ ದಫೇದಾರ ಹಾಗೂ ವ್ಯಾಪಾರಿಗಳಿದ್ದರು.