ವಿಶ್ವ ಪರಿಸರ ದಿನ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ಅಮೃತಾ ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ಕೊಪ್ಪಳದ ಮಾಸ್ತಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಚಿತ್ರಸ್ಪರ್ಧೆಯಲ್ಲಿ ಭಾಗಿಯಾಗಿದ್ದ ವಿವಿಧ ಶಾಲೆ ಮಕ್ಕಳು.
- ಚಿತ್ರಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗಿ
- ವಿಜಯವಾಣಿಗೆ ಧನ್ಯವಾದ ಅರ್ಪಿಸಿದ ಗಣ್ಯರು
ಕೊಪ್ಪಳ : ಚಿಣ್ಣರ ಲಗು-ಬಗೆ. ತದೇಕಚಿತ್ತದಿಂದ ಪುಟ್ಟ ಹಾಳೆಯಲ್ಲಿ ಬಣ್ಣ&ಬಣ್ಣದ ಪೆನ್ ಬಳಸಿ ತೆಗೆದ ಪರಿಸರದ ಬಗೆಗಿನ ಚಿತ್ರಗಳು. ಒಂದಕ್ಕಿಂತ ಒಂದು ಅದ್ಭುತ ! ಪ್ರಶಸ್ತಿಗೆ ಯಾವುದು ಆಯ್ಕೆ ಮಾಡಬೇಕ್ರಿ ? ಎಂಬ ನಿರ್ಣಾಯಕರ ಚಡಪಡಿಕೆ. ತಾವು ಬರೆದ ಚಿತ್ರ ಅತ್ಯುತ್ತಮವೆಂದು ಪ್ರಶಸ್ತಿ ಪಡೆದಿದ್ದಕ್ಕೆ ಖುಷಿಯಿಂದ ಮಕ್ಕಳು ಕುಣಿಸದ ಮಧುರ ಕ್ಷಣಗಳು.
ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿಯಿಂದ ಅಮೃತಾ ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ನಗರದ ಮಾಸ್ತಿ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸ್ಥಳದಲ್ಲೇ ಚಿತ್ರ ಬಿಡುಸುವ ಸ್ಪರ್ಧೆಯಲ್ಲಿ ಕಂಡ ಚಿತ್ರಣ ಇದು. ಜಿಲ್ಲೆಯ ವಿವಿಧ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಸಂಭ್ರಮದಿಂದ ಭಾಗಿಯಾಗಿ ತಮ್ಮ ಕಲ್ಪನಾತೀತ ಪರಿಸರಕ್ಕೆ ಕುಂಚ ಬಳಸಿ ರಂಗು ತುಂಬಿ ಹರ್ಷಪಟ್ಟರು.
ಮುಖ್ಯ ಅತಿಥಿ ಡಾ.ಮಂಜುನಾಥ ಸಜ್ಜನ ಮಾತನಾಡಿ, ದೇವರಿಗಿಂತ ಪರಿಸರ ದೊಡ್ಡದು. ನಮ್ಮ ಬದುಕಿಗೆ ಆಧಾರವಾದ ಎಲ್ಲ ಅಗತ್ಯ ಪೂರೈಸುವುದು ಪರಿಸರ. ನಿತ್ಯ ಲಾಂತರ ಟನ್ ತ್ಯಾಜ್ಯ ಸೃಷ್ಟಿಯಾಗಿ ವಾತಾವರಣ ಹಾಳು ಮಾಡುತ್ತಿದೆ. ನಗರದ ಎಲ್ಲ ತ್ಯಾಜ್ಯ ನದಿಗೆ ಸೇರುತ್ತಿದೆ. ಸರ್ಕಾರ ಪ್ಲಾಸ್ಟಿಕ್ ಉತ್ಪಾದನೆ ಬ್ಯಾನ್ ಮಾಡಲಿ. ಪರಿಸರ ಮಾಲಿನ್ಯ ಬಗ್ಗೆ ವಿಜಯವಾಣಿ ಅನೇಜ ಜನಪರ ವರದಿ ಮಾಡಿ ಗಮನ ಸೆಳೆದಿದೆ. ಈಗ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅತ್ಯಂತ ಸ್ತುತ್ಯಾರ್ಹವೆಂದು ಬಣ್ಣಿಸಿದರು.
ಕಿಮ್ಸ್ ಎಂ.ಎಸ್. ಡಾ.ಮಂಜುನಾಥ ಸಾಲ್ಮನಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ನೀರು ಮಿತ ಬಳಕೆ ಇರಲಿ. ಎಲ್ಲರೂ ಒಂದೊಂದು ಗಿಡ ನೆಡುವ ಮೂಲಕ ಪರಿಸರ ರಸಬೇಕು. ಮಕ್ಕಳ ಕಲ್ಪನೆಗೆ ಬಣ್ಣದ ರೂಪ ನೀಡಲು ವಿಜಯವಾಣಿಯಿಂದ ಹಮ್ಮಿಕೊಂಡ ಚಿತ್ರಸ್ಪರ್ಧೆ ಅನುಕರಣೀಯ. ಇಂಥ ಇನ್ನಷ್ಟು ಕಾರ್ಯಕ್ರಮಗಳಾಗಿ. ಮಕ್ಕಳು ಪರಿಸರ ರಕ್ಷಣೆಗೆ ಆದ್ಯತೆ ನೀಡಲಿ ಎಂದು ಸಲಹೆ ನೀಡಿದರು.
ಮಾಸ್ತಿ ಪಬ್ಲಿಕ್ ಶಾಲೆ ಪ್ರಾಚಾರ್ಯ ಪರಶುರಾಮ ಮ್ಯಾಗಳಮನಿ, ವಿಜಯವಾಣಿ ಗಂಗಾವತಿ ಜಾಹೀರಾತು ವ್ಯವಸ್ಥಾಪಕ ವಿಜಯೀಂದ್ರ ಗುಮಾಸ್ತೆ, ಪ್ರಸರಣ ಪ್ರತಿನಿಧಿ ಕೊಪ್ರೇಶ್ ಜೋಶಿ, ಹಿರಿಯ ವರದಿಗಾರ ರವೀಂದ್ರ ರಡ್ಡಿ, ಬಿಡಿ ವರದಿಗಾರ ರಮೇಶ, ಫೋಟೋ ರ್ಜನಲಿಸ್ಟ್ ನಾಗರೆಡ್ಡಿ ಹಡಗಲಿ, ಅಮಿತ್ ಮಾಲಗಿತ್ತಿ ಇದ್ದರು.
10 ವಿಜೇತರಿಗೆ ಬಹುಮಾನ
ಜೂನಿಯರ್ (5-7ನೇ ತರಗತಿ), ಸೀನಿಯರ್ (8-10ನೇ ತರಗತಿ) ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಯಿತು. ಜೂನಿಯರ್ ವಿಭಾಗದಲ್ಲಿ ಕೊಪ್ಪಳದ ಶಾಂತಿನಿಕೇತನ ಪ್ರಾಥಮಿಕ ಶಾಲೆಯ 7ನೇ ತಗರತಿಯ ಗವಿಸಿದ್ದಮ್ಮ (ಪ್ರಥಮ), ಕೊಪ್ಪಳದ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿಯ ಆನಮ್ (ದ್ವೀತಿಯ), ಕೊಪ್ಪಳದ ಕೆಂದ್ರೀಯ ವಿದ್ಯಾಲಯದ 7ನೆ ತರಗತಿಯ ನಿಖಿತಾ (ತೃತೀಯ), ಎಜ್ಯುಕೇರ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ತನುಜಾ ಎಸ್.ಆರ್. ಹಾಗೂ ಮಾಸ್ಲಿ ಪಬ್ಲಿಕ್ ಶಾಲೆಯ 6ನೇ ತರಗತಿಯ ಖಾಜಾಬಿ ಸಮಾಧಾನಕರ ಬಹುಮಾನ ಪಡೆದರು.
ಸಿನೀಯರ್ ವಿಭಾಗದಲ್ಲಿ ಕೊಪ್ಪಳದ ಎಸ್ಎ್ಎಸ್ ಹೈ ಸ್ಕೂಲ್ನ 10ನೇ ತರಗತಿಯ ಸಾಧನಾ ಜಹಗೀರದಾರ್ (ಪ್ರಥಮ), ಮಾಸ್ತಿ ಪಬ್ಲಿಕ್ ಶಾಲೆಯ 8ನೇ ತರಗತಿಯ ಆಯಿಷಾ ಮನಿಯಾರ್ (ದ್ವೀತಿಯ), ಕೊಪ್ಪಳದ ಶಾಂತಿನಿಕೇತನ ಪ್ರೌಢ ಶಾಲೆಯ 10ನೇ ತರಗತಿಯ ಅಶ್ಪಕ್ (ತೃತೀಯ), ನಿವೇದಿತಾ ಹೈ ಸ್ಕೂಲ್ನ 10ನೇ ತರಗತಿಯ ನಿತಿನ್ ಡಿ. ಹಾಗೂ ಸರ್ಕಾರಿ ಪ್ರೌಢ ಶಾಲೆ ಬಿನ್ನಾಳದ 10ನೇ ತರಗತಿಯ ಶಶಿಕಲಾ ಚಟ್ಟಿ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟರು.
"
ಕೈಗಾರಿಕೆಗಳಿಂದ ಕೊಪ್ಪಳ ಕಲುಷಿತಗೊಳ್ಳುತ್ತಿದೆ. ಮಕ್ಕಳು ಒಬ್ಬರಿಗಿಂತ ಮತ್ತೊಬ್ಬರು ಅದ್ಭುತ ಚಿತ್ರ ಬಿಡಿಸಿದ್ದೀರಿ. ಆಯ್ಕೆ ನನಗೆ ಸವಾಲೆನಿಸಿತು. ನಿಮ್ಮ ಪ್ರತಿಭೆ ಮುಂದುವರೆಯಲಿ. ಪರಿಸರ ಪ್ರೀತಿ ಬೆಳೆಸಿಕೊಳ್ಳಿ. ಗೆದ್ದವರು ಇನ್ನಷ್ಟು ಸುಧಾರಿಸಿ. ಸೋತವರು ಮತ್ತೆ ಯತ್ನಿಸಿ. ಮಕ್ಕಳಿಗೆ ವಿಭಿನ್ನ ಚಟುವಟಿಕೆ ಆಯೋಜಿಸಿದ್ದು ಪ್ರಶಂಸನೀಯ.
— ರಾಜು ತೇರದಾಳ. ರಾಷ್ಟ್ರೀಯ ಕಲಾವಿದ ಕೊಪ್ಪಳ.
"
ವಿಜಯವಾಣಿ ಬಳಗ ನಮ್ಮ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಧನ್ಯವಾದಗಳು. ನಮ್ಮ ಬದುಕಿಗೆ ಪರಿಸರ ಬಹುಮುಖ್ಯ. ಈಗಲೇ ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಉಸಿರಾಡು ಗಾಳಿಗೂ ಪರದಾಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ನಾವೆಲ್ಲ ಪರಿಸರ ಉಳಿಸೋಣ.
— ಹುಲುಗಪ್ಪ ಕಟ್ಟಿಮನಿ. ಮಾಸ್ತಿ ಪಬ್ಲಿಕ್ ಶಾಲೆ ಮುಖ್ಯಸ್ಥ ಕೊಪ್ಪಳ.