ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿನ ಬಿ.ಕಲ್ಲೇಶ ಒಡೆತನದ ನವಚೇತನ ಪಿಯು ಕಾಲೇಜು. 
ಕೊಪ್ಪಳ

ಬಿ.ಕಲ್ಲೇಶ ಮೇಲೆ ಲೋಕಾ ದಾಳಿ

ಪ್ರಮುಖ ಮುಖ್ಯಾಂಶಗಳು

  • ಕಚೇರಿ, ಕಾಲೇಜು ಸೇರಿ ಆರು ಕಡೆ ಸರ್ಚ್​
  • ನಗದು, ಚಿನ್ನಾಭರಣ ವಶ
ಕೊಪ್ಪಳ: ನಗರದ ವೈದ್ಯಕಿಯ ವಿಜ್ಞಾನಗಳ ಸಂಸ್ಥೆ (ಕಿಮ್ಸ್​) ಆಡಳಿತಾಧಿಕಾರಿ ಬಿ.ಕಲ್ಲೇಶ ನಿವಾಸ, ಕಚೇರಿ ಹಾಗೂ ಕಾಲೇಜು ಸೇರಿ ಆರು ಸ್ಥಳಗಳಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಪಾರ ನಗದು, ಚಿನ್ನಾಭರಣ, ಮಹತ್ವದ ದಾಖಲೆ ವಶಕ್ಕೆ ಪಡೆದಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಕಿಮ್ಸ್​ ಆಡಳಿತಾಧಿಕಾರಿ ಕಚೇರಿ, ಭಾಗ್ಯನಗರದ ಯತ್ನಟ್ಟಿ ರಸ್ತೆಯಲ್ಲಿನ ನವಚೇತನಾ ಪಿಯು ಕಾಲೇಜು, ವಾಸದ ಮನೆ, ಅತ್ತೆ ಮನೆ, ಕೋಆಪರೇಟಿವ್​ ಬ್ಯಾಂಕ್​ ಹಾಗೂ ಚಿಕ್ಕಮನ್ನಾಪುರದಲ್ಲಿ ಏಕಕಾಲಕ್ಕೆ ದಾಳಿಯಾಗಿದೆ. ಸುಮಾರು 30 ಅಧಿಕಾರಿಗಳ ತಂಡ ಪರೀಶೀಲನೆ ನಡೆಸಿತು.
ಬೆಳಗಿನಿಂದ ಸಂಜೆವರೆಗೂ ನಡೆದ ಪರಿಶೀಲನೆಯಲ್ಲಿ 36 ಲಕ್ಷ ರೂ. ನಗದು, 1 ಕೆಜಿ ಚಿನ್ನಾಭರಣ, 3.5 ಕೆಜಿ ಬೆಳ್ಳಿ ಪತ್ತೆಯಾಗಿದೆ. ವಿವಿಧ ಬ್ಯಾಂಕ್​ ಖಾತೆಗಳಲ್ಲಿ 61 ಲಕ್ಷ ರೂ. ಹಣ ಇರುವುದು ಬೆಳಕಿಗೆ ಬಂದಿದೆ. ಕಾಲೇಜು ಕಟ್ಟಡವೊಂದೇ 10 ಕೋಟಿ ರೂ. ಬೆಲೆ ಬಾಳಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇನ್ನು 31 ಎಕರೆ ಜಮೀನು ಹೊಂದಿರುವ ದಾಖಲೆ ಪತ್ತೆಯಾಗಿವೆ. ಪರಿಶೀಲನೆ ಮುಂದುವರೆದಿದ್ದು, ಇನ್ನಷ್ಟು ಮಹತ್ವದ ದಾಖಲೆ ಪತ್ತೆ ನಿರೀೆಯಲ್ಲಿ ಅಧಿಕಾರಿಗಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಉನ್ನತ ಅಧಿಕಾರಿಯಾಗಿದ್ದ ಕಲ್ಲೇಶ ಎಸ್ಟಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ಸುದ್ದಿಯಾಗಿದ್ದರು. ಇಡಿ ತನಿಖೆಯನ್ನೂ ಎದುರಿಸಿದ್ದರು. ಬಳಿಕ ಕಿಮ್ಸ್​ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಜಿಪಂ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾಗ್ಯನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ನವಚೇತನಾ ಪಿಯು ಕಾಲೇಜು ಒಂದಾಗಿದೆ. ಕಲ್ಲೇಶ ಒಡೆತನದ ಸಂಸ್ಥೆಯಾಗಿದ್ದು, ಅವರ ಪತ್ನಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗೆ ಪದವಿ ಕಾಲೇಜು ಆರಂಭಿಸಿದ್ದು ಜಿಲ್ಲೆಯಲ್ಲಿಯೇ ಅಧಿಕಾರಿಯಾಗಿ ಮುಂದುವರೆದಿದ್ದಾರೆ.