ಗಂಗಾವತಿ ಉಪವಿಭಾಗ ಪೊಲೀಸ್ ಠಾಣೆ ಆವರಣದಲ್ಲಿ ಮೊಹರಂ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಮಾತನಾಡಿದರು. ಪಿಐ ಪ್ರಕಾಶ ಆರ್.ಯಾತನೂರ್, ನಗರಸಭೆ ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಇತರರಿದ್ದರು.
- ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಹೇಳಿಕೆ
- ಶಾಂತಿ ಸಭೆ
ಗಂಗಾವತಿ: ಮುನ್ನೆಚ್ಚರಿಕೆ ಕ್ರಮವಾಗಿ ನಗರದ ವಿರುಪಾಪುರ ತಾಂಡಾ ಮತ್ತು ಎಪಿಎಂಸಿ ಹಮಾಲರ ಕಾಲನಿಯಲ್ಲಿ ಮೊಹರಂ ಹಬ್ಬ ನಿಷೇಧಿಸಿದ್ದು, ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಬಾರದು ಎಂದು ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಹೇಳಿದರು.
ನಗರದ ಉಪವಿಭಾಗ ಪೊಲೀಸ್ ಠಾಣೆ ಆವರಣದಲ್ಲಿ ಮೊಹರಂ ಹಬ್ಬದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಮೂರು ವರ್ಷಗಳ ಹಿಂದೆ ನಡೆದ ಗಲಭೆ ಕಾರಣಕ್ಕೆ ವಿರುಪಾಪುರ ತಾಂಡಾ ಮತ್ತು ಕಳೆದ ವರ್ಷ ಎರಡು ಗುಂಪುಗಳ ನಡುವಿನ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಮೊಹರಂ ಆಚರಣೆ ನಿಷೇಧಿಸಲಾಗಿದೆ.
ನಗರದಲ್ಲಿ 33ಕ್ಕೂ ಹೆಚ್ಚು ಪೀರಲ ದೇವರುಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಜೂ.23ರಿಂದಲೇ ಮದ್ಯ ಮಾರಾಟ ನಿಷೇಧಿಸುವ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗುವುದು. ಜೂ.25ರಂದು ವಿದಾಯ ಮೆರವಣಿಗೆಯಿದ್ದು, ಅಂದು ಮುನಿರಾಬಾದ್‌ಗೆ ಸಿಎಂ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಂದೋಬಸ್ತ್ ವ್ಯವಸ್ಥೆ ಇರುವುದರಿಂದ ಪೊಲೀಸರ ನಿಯೋಜನೆ ಕಡಿಮೆಯಾಗಬಹುದು.
ಆದ್ದರಿಂದ ಸ್ಥಳೀಯರೇ ಗಲಭೆಯಾಗದಂತೆ ಎಚ್ಚರಿಕೆ ವಹಿಸಬೇಕಿದ್ದು, ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದರೆ ಪ್ರತಿಷ್ಠಾಪನೆ ಸಮಿತಿಯವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.
ಗೊಂದಲ ಸೃಷ್ಟಿಸುವವರ ಬಗ್ಗೆ ನಿಗಾವಹಿಸಬೇಕಿದ್ದು, ಮೊದಲೇ ತಿಳಿಸಿದರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. ಪ್ರತಿಷ್ಠಾಪನೆ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಜೆಸ್ಕಾಂ ಗಮನಹರಿಸುತ್ತಿದ್ದು, ಸ್ವಚ್ಛತೆ ವಿಚಾರದಲ್ಲಿ ನಗರಸಭೆ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದರು.
ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ನಗರ ಪಿಐ ಪ್ರಕಾಶ ಆರ್.ಯಾತನೂರ್, ಪಿಎಸ್‌ಐ ಜಿ.ಟಿ.ನಾಗರಾಜ್ ಇತರರಿದ್ದರು.