ಕನಕಗಿರಿ ತಹಸಿಲ್ ಕಚೇರಿಯ ಉಪ ತಹಸೀಲ್ದಾರ್ ಅನಿತಾ ಇಂಡಿಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬುಧವಾರ ಮನವಿ ಸಲ್ಲಿಸಿದರು.ಪ್ರಮುಖರಾದ ಬಸವರಾಜ ನಾಯಕ, ಅಮರೇಶ, ಲಕ್ಷ್ಮಣ ಚಿಟಗಿ, ಸಂಪತಕುಮಾರ ಇತರರಿದ್ದರು.
- ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆಗ್ರಹ
- ಉಪತಹಸೀಲ್ದಾರ್ ಅನಿತಾ ಇಂಡಿಗೆ ಮನವಿ ಸಲ್ಲಿಕೆ
ಕನಕಗಿರಿ: ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಪ್ರಸ್ತಾವಿತ ತಿದ್ದುಪಡಿಯನ್ನು ಸುವರ್ಣಸೌಧದಲ್ಲಿ ಮಂಡಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬುಧವಾರ ಪಟ್ಟಣದ ತಹಸಿಲ್ ಕಚೇರಿಯ ಉಪತಹಸೀಲ್ದಾರ್ ಅನಿತಾ ಇಂಡಿಗೆ ಮನವಿ ಸಲ್ಲಿಸಿದರು.
ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಅಯ್ಯನಗೌಡರೆಡ್ಡಿ ಅಳ್ಳಳ್ಳಿ ಮಾತನಾಡಿ, ತಿದ್ದುಪಡಿಯು ಸಂವಿಧಾನದ ಆಶಯಕ್ಕೆ ಹಾಗೂ ಹಿಂದು ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿದೆ. ಕರ್ನಾಟಕ ಸರ್ಕಾರ ತನ್ನ ಕ್ಯಾಬಿನೆಟ್ ಸಭೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಸೆಕ್ಷನ್ 8(4)ಕ್ಕೆ ತಿದ್ದುಪಡಿ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡಿದೆ. ಈ ಕಾಯಿದೆಯ ತಿದ್ದುಪಡಿ ಮಾಡುವುದನ್ನು ತಕ್ಷಣ ಕೈಬಿಡಬೇಕು.
ಜಾನುವಾರು ರಕ್ಷಣೆ ಮಾಡುವುದು ನಮ್ಮೆಲ್ಲರ ಧ್ಯೇಯವಾಗಿದೆ. ಈಗಾಗಲೇ ಜಾನುವಾರುಗಳ ಸಂತತಿ ಕ್ಷೀಣಿಸಿದೆ. ಇಂತಹ ಸಂಗತಿಗಳ ನಡುವೆಯೂ ಜಾನುವಾರು ಸಂರಕ್ಷಣೆಯ ಕಾಯಿದೆಯಲ್ಲಿ ತಿದ್ದುಪಡಿ ತರುವುದು ನ್ಯಾಯವಲ್ಲ. ಈ ಕಾಯಿದೆಯ ಜಾರಿಯಿಂದಾಗಿ ಜಾನುವಾರುಗಳನ್ನು ಕಟುಕರು ಕ್ರೂರವಾಗಿ ತಿನ್ನುವುದು ಹೆಚ್ಚಾಗಲಿದೆ. ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಜಾನುವಾರು ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ತರಬಾರದು. ತಂದರೆ ಮುಂದಿನ ದಿನಗಳಲ್ಲಿ ಆಪತ್ತು ಎದುರಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.