ಮಗುವಿನ ಕೈಯಿಡಿದು ಅಕ್ಷರ ಬರೆಸುತ್ತಿರುವ ಗವಿಶ್ರೀಗಳು.
- ಭಕ್ತಿಭಾವದಿಂದ ಜರುಗಿದ ಅಕ್ಷರಾಭ್ಯಾಸ
- ಗವಿಶ್ರೀಗಳಿಂದ ಚಿಣ್ಣರಿಗೆ ಓದು-ಬರಹ ಪ್ರಾರಂಭ
ಕೊಪ್ಪಳ: ಶಾಲೆಗೆ ಪ್ರವೇಶ ಪಡೆಯುವ ಮುನ್ನ ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ಮತ್ತು ವಿದ್ಯೆಯ ಆರಂಭಿಕ ಆಶೀರ್ವಾದ ದೊರಕಲಿ ಎಂಬ ಉದ್ದೇಶದಿಂದ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ತಮ್ಮ ಕೈಯಾರೆ ಮಕ್ಕಳಿಗೆ ಮೊದಲ ಅಕ್ಷರ ಬರೆಸುವ ಮೂಲಕ ಅಕ್ಷರಾಭ್ಯಾಸ ವಾಡಿಸಿದರು.
ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಕೊಪ್ಪಳದದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಾಂಪ್ರದಾಯಿಕ ಅಕ್ಷರಾಭ್ಯಾಸ ಕಾರ್ಯಕ್ರಮವು ಭಕ್ತಿಭಾವದಿಂದ ಶುಕ್ರವಾರ ಗವಿಮಠದ ಆವರಣದಲ್ಲಿ ಬೆಳಗಿನ ಜಾವ ಲಿಂಗದೀಕ್ಷೆ ಕಾರ್ಯಕ್ರಮದ ಬಳಿಕ ಬೆಳಗ್ಗೆ 9 ಗಂಟೆಯಿಂದ ಆರಂಭವಾಯಿತು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ತಮ್ಮ ಮಕ್ಕಳೊಂದಿಗೆ ಮಠಕ್ಕೆ ಆಗಮಿಸಿ ಕರ್ತೃ ಗದ್ದುಗೆ ದರ್ಶನ ಪಡೆದು ಶ್ರೀಗಳ ಆಶೀರ್ವಾದ ಪಡೆದರು.
ಪೀಠಾಧಿಪತಿ ತಮ್ಮ ಅಮೃತ ಹಸ್ತದಿಂದ ಪುಟ್ಟ ಮಕ್ಕಳಿಗೆ ಪಾಟಿ ಹಾಗೂ ನೋಟ್‌ಬುಕ್ ಮೇಲೆ ಮೊದಲ ಅಕ್ಷರಗಳನ್ನು ಬರೆಸುವ ಮೂಲಕ ವಿದ್ಯಾರಂಭ ನೆರವೇರಿಸಿದರು. ಈ ಶುಭ ಕ್ಷಣಕ್ಕೆ ಸಾಕ್ಷಿಯಾಗಲು ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳಷ್ಟೇ ಅಲ್ಲದೇ, ಇತರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪಾಲಕರು ಮಕ್ಕಳೊಂದಿಗೆ ಆಗಮಿಸಿದ್ದರು.
ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯ, ಉತ್ತಮ ಶಿಕ್ಷಣ ಹಾಗೂ ಸಂಸ್ಕಾರಯುತ ಜೀವನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಠದ ಆವರಣದಲ್ಲಿ ದಿನವಿಡೀ ಭಕ್ತರ ಸಂಚಾರ ಹೆಚ್ಚಿದ್ದು, ಧಾರ್ಮಿಕ ಹಾಗೂ ಹಬ್ಬದ ವಾತಾವರಣ ನಿರ್ವಾಣವಾಗಿತ್ತು. ಅಕ್ಷರಾಭ್ಯಾಸ ಬಳಿಕ ಸಹಸ್ರಾರು ಭಕ್ತಾದಿಗಳು ಶ್ರೀಮಠದ ದಾಸೋಹ ಭವನದಲ್ಲಿ ಮಹಾಪ್ರಸಾದ ಸ್ವೀಕರಿಸಿದರು. ಮಹಿಳೆಯರು, ಹಿರಿಯರು ಹಾಗೂ ಮಕ್ಕಳು ಸಾಗರೋಪಾದಿಯಲ್ಲಿ ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾದರು.