ಕನಕಗಿರಿಯಲ್ಲಿ ಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಕುಂಟಿದಿಂಡಿನ ಮೇಲೆ ಉಸುಕಿನ ಚೀಲ ಎಳೆಯುವ ಸ್ಪರ್ಧೆ ನಡೆಯಿತು.
- ಉಸುಕಿನ
- ಚೀಲ
- ಎಳೆಯುವ ಸ್ಪರ್ಧೆ
ಕನಕಗಿರಿ: ಚಿನ್ನಕ್ಕಿಂತ ಅನ್ನವೇ ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿತು ಬಾಳಬೇಕಿದೆ ಎಂದು ಸುವರ್ಣಗಿರಿ ಸಂಸ್ಥಾನಮಠದ ಡಾ. ಚನ್ನಮಲ್ಲ ಮಹಾಸ್ವಾಮೀಜಿ ಹೇಳಿದರು.
ಮಹಾಶಿವರಾತ್ರಿ ನಿಮಿತ್ತ ಪಟ್ಟಣದ ಬಸರಿಹಾಳ ರಸ್ತೆಯಲ್ಲಿನ ಜಮೀನೊಂದರಲ್ಲಿ ಹಮ್ಮಿಕೊಂಡಿದ್ದ ಎತ್ತುಗಳಿಗೆ ಕಟ್ಟಿದ ಕುಂಟಿ ದಿಂಡಿನ ಮೇಲೆ ಉಸುಕಿನ ಚೀಲ ಎಳೆಯುವ ಸ್ಪರ್ಧೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಜೀವಿಯೂ ಬದುಕಬೇಕೆಂದರೆ ಗಾಳಿ, ನೀರಿನಷ್ಟು ಆಹಾರವೂ ಅವಶ್ಯ. ಅದರಂತೆ ಬುದ್ಧಿಜೀವಿ ಎನ್ನಿಸಿಕೊಂಡಿರುವ ಮನುಷ್ಯನಿಗೆ ಆಹಾರವನ್ನು ಒದಗಿಸುವವನು ರೈತ. ದೇಶದ ಬೆನ್ನೆಲುಬು ರೈತ ಎನ್ನುತ್ತಾರೆ. ಆದರೆ, ರೈತರು ನಾನಾ ಕಾರಣಗಳಿಂದ ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ. ರೈತನು ಬೆಳೆಯದಿದ್ದರೆ, ನಮಗೆ ಆಹಾರ ಸಿಗುವುದಿಲ್ಲ. ಅದಕ್ಕಾಗಿ ರೈತನಿಗೆ ಗೌರವಿಸಬೇಕು ಎಂದರು. ಉಸುಕಿನ ಚೀಲ ಎಳೆಯು ಸ್ಪರ್ಧೆ ಆಯೋಜಿಸಿ ಜನಪದ ಕ್ರೀಡೆ ಉಳಿಸಿ ಬೆಳೆಸುವ ಕಾ
ರ್ು ಮಾಡಿರುವುದು ಸಂತೋಷವಾಗಿದೆ. ಇಂತಹ ಹಳ್ಳಿ ಸೊಗಡಿನ ಕ್ರೀಡೆಗಳ ಆಯೋಜನೆಯಿಂದ ರೈತರು ಒಗ್ಗೂಡುವಿಕೆ ಗಟ್ಟಿಯಾಗಲಿದೆ ಎಂದರು.
ಎತ್ತುಗಳಿಗೆ ಬಹುಮಾನ: ಹುಸೇನಸಾಬ ಗೋರಳ್ಳಿ ಅವರ ಎತ್ತುಗಳು ಪ್ರಥಮ ಸ್ಥಾನ ಪಡೆದರೆ ಮೆಲುಗಡೆ ಅಗಸಿಯ ಮೈಲಾರಿ ಸಿಂಗಾಪೂರ ದ್ವಿತೀಯ ಹಾಗೂ ಯುವ ರೈತ ನಾಗರಾಜ ಆರೇರ್ ಅವರ ಎತ್ತುಗಳು ತೃತೀಯ ಸ್ಥಾನ ಪಡೆದವು. ವಿಜೇತ ಎತ್ತುಗಳಿಗೆ ಕನಕದುರ್ಗಮ್ಮ ಎತ್ತುಗಳ ಕ್ಷೇಮಾಭಿವೃದ್ಧಿ ಸಂಘದಿಂದ ಮೆಕ್ಕೆಜೋಳದ ಚೀಲಗಳನ್ನು ನೀಡಿ ಗೌರವಿಸಲಾಯಿತು.
ಪ.ಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯ ಹನುಮಂತ ಬಸರಿಗಿಡ, ನಾಮ ನಿರ್ದೇಶಿತ ಸದಸ್ಯ ಶಾಂತಪ್ಪ ಬಸರಿಗಿಡ, ಪ್ರಮುಖರಾದ ಗಂಗಾಧರಸ್ವಾಮಿ, ವಾಗೀಶ ಹಿರೇಮಠ, ಸಣ್ಣ ಕನಕಪ್ಪ, ಮಹಾಂತೇಶ ಸಜ್ಜನ್, ಟಿ.ಜೆ ರಾಮಚಂದ್ರ, ಕೆ.ಎಚ್ ಕುಲಕರ್ಣಿ, ಶರಣಪ್ಪ ಭತ್ತದ, ನಿರುಪಾದಿ ಗೊಲ್ಲರ್, ಹನುಮಂತಪ್ಪ ಬೆಲ್ಲದಂಡಗಿ, ಕಂಠೆಪ್ಪ ತರ್ಲಕಟ್ಟಿ, ಗಣೇಶರೆಡ್ಡಿ ಕೆರಿ, ಕೃಷ್ಣಮೂರ್ತಿ ದಾಸರ ಇತರರಿದ್ದರು.
ಒಣ ರಾಜಕೀಯದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಾಯಕ, ನಿಷ್ಠೆಯನ್ನು ಮೈಗೂಡಿಸಿಕೊಂಡು ಸಂಘಟಿತರಾಗಬೇಕು. ಯುವ ರೈತರು ದುಶ್ಚಟಕ್ಕೆ ಬಲಿಯಾಗುವುದು ಬೇಸರದ ವಿಷಯ. ಚಟ ಮುಕ್ತರಾಗಿ ಜೀವನ ಸಾಗಿಸಿದರೆ ರೈತ ಸಮೂಹಕ್ಕೆ ಕನ್ಯೆ ಕೊಡಲಿಕ್ಕೆ ಪಾಲಕರು ಮುಂದಾಗುತ್ತಾರೆ. ರೈತರಲ್ಲಿ ಹೊಸ ಆಲೋಚನೆಗಳು ಹೊರಬಂದಾಗಲೇ ನಮ್ಮ ಪ್ರಗತಿಗೆ ಸ್ಫೂರ್ತಿಯಾಗಲಿದೆ.