ಸಿದ್ದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ, ಹೊಸ ಮತದಾರರ ವಿಶೇಷ ನೋಂದಣಿ ಅಭಿಯಾನ ಕಾರ್ಯಕ್ರಮ ಜರುಗಿತು. ತಾಲೂಕು ಐಇಸಿ ಸಂಯೋಜಕ ಸೋಮನಾಥ, ಪ್ರಾಚಾರ್ಯ ವಾಮದೇವ ಮೂರ್ತಿ, ಬಿಎಲ್‌ಒ ವೀರೇಶ್ ಗಿಂಡಿಮಠ ಇದ್ದರು.
- ಗ್ರಾಪಂ ಪಿಡಿಒ ಜ್ಯೋತಿ ರಡ್ಡೆರ್ ಸಲಹೆ
- ಸಿದ್ದಾಪುರ ಮತದಾರರ ವಿಶೇಷ ನೋಂದಣಿ ಅಭಿಯಾನ
ಸಿದ್ದಾಪುರ: ಸುಭದ್ರ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಯುವ ಮತದಾರರ ಪಾತ್ರ ನಿರ್ಣಾಯಕವಾಗಿದೆ. 18 ವರ್ಷ ತುಂಬಿದ ಯುವಕರು ನಮೂನೆ-6 ಭರ್ತಿ ಮಾಡಿ, ಅಗತ್ಯ ದಾಖಲೆ ಸಲ್ಲಿಸಿ ಮತದಾನದ ಅವಕಾಶ ಪಡೆಯಬೇಕು ಎಂದು ಗ್ರಾಪಂ ಪಿಡಿಒ ಜ್ಯೋತಿ ರಡ್ಡೆರ್ ಹೇಳಿದರು.
ಸಿದ್ದಾಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ವಿಶ್ವಚೇತನ ಪಿಯು ಕಾಲೇಜಿನಲ್ಲಿ ತಾಲೂಕಾಡಳಿತ, ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಪಂ ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ, ಹೊಸ ಮತದಾರರ ವಿಶೇಷ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು. ಯುವಸಮೂಹ ಮತದಾನ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. 18 ವರ್ಷ ತುಂಬಿದವರು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕು. ಹೊಸ ಮತದಾರರ ಚೀಟಿಯನ್ನು ಪಡೆಯಬೇಕು ಎಂದು ಸಲಹೆ ನೀಡಿದರು. ಸರ್ಕಾರವು ರಾಜ್ಯಾದ್ಯಂತ ಯುವಶಕ್ತಿಯ ಸಬಲೀಕರಣ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಲು ಭಾರತ್ ಜೋಡೋ ಯುವ ಸಂಘ ನೋಂದಣಿ ಕಾರ್ಯ ಆರಂಭಿಸಿದೆ. ಯುವಕರು ಆಧಾರ್ ಕಾರ್ಡ್ ಮಾಹಿತಿ ನೀಡಿ ಯುವ ಸಂಘದ ಸದಸ್ಯತ್ವ ಪಡೆಯಬೇಕು ಎಂದರು. ತಾಲೂಕು ಐಇಸಿ ಸಂಯೋಜಕ ಸೋಮನಾಥ, ಪ್ರಾಚಾರ್ಯ ವಾಮದೇವ ಮೂರ್ತಿ, ಬಿಎಲ್‌ಒ ವೀರೇಶ್ ಗಿಂಡಿಮಠ ಇತರರಿದ್ದರು.