ತಳಕಲ್ ಸಮೀಪದ ವಿಟಿಯು ಸ್ನಾತಕೋತ್ತರ ಮತ್ತು ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ 1ಎಂ1ಬಿ ಗ್ರೀನ್ ಸ್ಕಿಲ್ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ ಮತ್ತು ಉದ್ಯೋಗ ಮೇಳವನ್ನು ಬೆಳಗಾವಿ ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ ಉದ್ಘಾಟಿಸಿದರು. ಸಮಾಜ ಸೇವಕಿ ಮಮತಾ ರಾಯರಡ್ಡಿ, ಕೌಶಲ್ಯ ಅಭಿವೃದ್ಧಿ ಕೇಂದ್ರದ ಉಪನಿರ್ದೇಶಕ ಎಸ್.ಬಸವರಾಜ, ಗ್ರಾಪಂ ಅಧ್ಯಕ್ಷೆ ಜಹೀರಾ ಬೇಗಂ ಜಾಕೀರ್ ಹುಸೇನ್, ಉಪಾಧ್ಯಕ್ಷೆ ಜಿದಾಬಿ ಗುಡಿಗುಡಿ ಇತರರಿದ್ದರು.
ಯುವಕರು ಸ್ವಯಂ ಉದ್ಯೋಗದತ್ತ ಗಮನಹರಿಸಲಿ
ಕುಕನೂರು: ಸರ್ಕಾರ ಮತ್ತು ಕಂಪನಿಗಳು ಎಲ್ಲರಿಗೂ ಉದ್ಯೋಗ ನೀಡುವುದು ಕಷ್ಟ. ಇದರಿಂದ ಯುವಕರು ಸ್ವಯಂ ಉದ್ಯೋಗ ಸೃಷ್ಠಿಸಿ ಇತರರಿಗೂ ಉದ್ಯೋಗ ನೀಡುವ ಕೌಶಲ ಬೆಳೆಸಿಕೊಳ್ಳಲಿ ಎಂದು ಬೆಳಗಾವಿ ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ ಹೇಳಿದರು.
ತಾಲೂಕಿನ ತಳಕಲ್ ಸಮೀಪದ ವಿಟಿಯು ಸ್ನಾತಕೋತ್ತರ ಮತ್ತು ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 1ಎಂ1ಬಿ ಗ್ರೀನ್ ಸ್ಕಿಲ್ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ ಮತ್ತು ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಜನತೆ ಕೌಶಲ ಪರಿಣಿತಿ ಹೊಂದುವ ಮೂಲಕ ಸ್ವಯಂ ಉದ್ಯೋಗದತ್ತ ಹೆಚ್ಚು ಗಮನಹರಿಸಲಿ ಎಂದರು.
ದೇಶದಲ್ಲಿ ದೊಡ್ಡ ಕಂಪನಿ ಹೊಂದಿರುವ ವ್ಯಕ್ತಿಗಳು ಮೊದಲು ಸಣ್ಣ ಉದ್ಯಮ ಆರಂಭಿಸಿ ದೇಶ, ವಿದೇಶ ಮಟ್ಟದಲ್ಲಿ ಇತರರಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆದಿದ್ದಾರೆ. ರಾಜ್ಯದಲ್ಲಿ ಶೇ.30 ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದು, ಪ್ರತಿ ವರ್ಷ 15 ರಿಂದ 18 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರ್ ಪದವಿ ಪಡೆಯುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ 300 ರಿಂದ 400 ವಿದ್ಯಾರ್ಥಿಗಳು ಮಾತ್ರ ಸಾಫ್ಟ್‌ವೇರ್ ಕುರಿತು ಕಲಿತವರಿದ್ದಾರೆ. ಕಲಿಯುವ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದರು.
ಸಮಾಜ ಸೇವಕಿ ಮಮತಾ ರಾಯರಡ್ಡಿ ಮಾತನಾಡಿ, ಉದ್ಯೋಗಕ್ಕಾಗಿ ಯುವಕರು ಬೆಂಗಳೂರಿನಂಥ ಮಹಾನಗರಕ್ಕೆ ವಲಸೆ ಹೋಗಬೇಕಾಗಿದೆ. ಈಗಾಗಲೇ ತಂದೆ ಬಸವರಾಜ ರಾಯರಡ್ಡಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ, ಎಂಜಿನಿಯರ್ ಕಾಲೇಜು, ಕೌಶಲ ಅಭಿವೃದ್ಧಿ ಸ್ಥಾಪಿಸಿದ್ದಾರೆ. ಉದ್ಯೋಗ ಮೇಳದ ಮೂಲಕ ಯುವಕರಿಗೆ ಉದ್ಯೋಗಕ್ಕೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕೌಶಲ ಅಭಿವೃದ್ಧಿ ಕೇಂದ್ರದ ಉಪನಿರ್ದೇಶಕ ಎಸ್.ಬಸವರಾಜ, ಗ್ರಾಪಂ ಅಧ್ಯಕ್ಷೆ ಜಹೀರಾ ಬೇಗಂ ಜಾಕೀರ್ ಹುಸೇನ್, ಉಪಾಧ್ಯಕ್ಷೆ ಜಿದಾಬಿ ಗುಡಿಗುಡಿ, ಸದಸ್ಯರಾದ ತಿಮ್ಮಣ್ಣ ಚವಡಿ, ಎಂ.ಡಿ.ಸಿರಾಜ್‌ಹುದಿನ್ ಕೊಪ್ಪಳ, ವೀರೇಶ ಬಿನಳ್ಳಿ, ಪಿಡಿಒ ವೀರನಗೌಡ ಚನ್ನವೀರನಗೌಡರ, ನಿರ್ದೇಶಕ ಅಬಿರಾಜ್, ಪ್ರಮುಖರಾದ ಡಾ.ರಾಜೇಶ್ವರಿ, ಪ್ರೊ.ಭರತೇಶ್, ಕವಿತಾ ಹಿರೇಮಠ, ಸುಗಮಗೌಡ, ಕೌಶರ್ ಬಾನು, ಗುರುಬಸವ, ಚಂದನಾ, ಪೂಜಾ, ತ್ರಿವೇಣಿ, ನೂರ್‌ಜಾನ್ ಇತರರಿದ್ದರು.