ಗಂಗಾವತಿಯಲ್ಲಿ ಶುಕ್ರವಾರ ಸಿಪಿಐ (ಎಂ) ಸದಸ್ಯರು ಪ್ರತಿಭಟನೆ ನಡೆಸಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಕಾರ್ಯದರ್ಶಿ ಮಂಡಳಿ ಸದಸ್ಯ ಬಸವರಾಜ ಮರಕುಂಬಿ, ತಾಲೂಕು ಕಾರ್ಯದರ್ಶಿ ಕೆ. ಹುಸೇನಪ್ಪ, ಮಂಜುನಾಥ ಡಗ್ಗಿ ಇತರರಿದ್ದರು. 
ಕೊಪ್ಪಳ

ದೇವಸ್ಥಾನದ ಅನುದಾನ ದುರ್ಬಳಕೆ ತನಿಖೆಯಾಗಲಿ

ಪ್ರಮುಖ ಮುಖ್ಯಾಂಶಗಳು

  • ಗಂಗಾವತಿಯಲ್ಲಿ ಸಿಪಿಐ(ಎಂ) ಪ್ರತಿಭಟನೆ
  • ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯ

ಗಂಗಾವತಿ:

ದೇವಾಲಯಗಳ ಜೀರ್ಣೋದ್ಧಾರದ ನೆಪದಲ್ಲಿ ಸರ್ಕಾರಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸಿಪಿಐ (ಎಂ) ತಾಲೂಕು ಸಮಿತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದ ಸಿಬಿಎಸ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ದೇವಸ್ಥಾನಗಳ ಜೀರ್ಣೋದ್ಧಾರದ ಹೆಸರಿನಲ್ಲಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪ್ರತಿ ಕಾಮಗಾರಿಗೆ ಕನಿಷ್ಠ 3ರಿಂದ 10 ಲಕ್ಷ ರೂ.ವರೆಗೆ ಅನುದಾನ ಮಂಜೂರು ಮಾಡಿಸಿಕೊಂಡು, ಯಾವುದೇ ರೀತಿಯ ಕಾಮಗಾರಿ ನಿರ್ವಹಿಸದೆ ಹಣವನ್ನು ಎತ್ತುವಳಿ ಮಾಡಲಾಗಿದೆ. ಕಾಮಗಾರಿಗಳನ್ನು ಕೈಗೊಳ್ಳುವ ಬದಲು ನೇರವಾಗಿ ಹಣ ನೀಡುವುದಾಗಿ ದೇವಸ್ಥಾನ ಸಮಿತಿಗಳಿಗೆ ತಿಳಿಸಲಾಗಿದ್ದು, ಇದು ಸಂವಿಧಾನ ವಿರೋಧಿ ನಡವಳಿಕೆಯಾಗಿದೆ. ಈ ಪ್ರಕರಣದ ಕುರಿತು ಕೂಡಲೇ ಸಮಗ್ರ ತನಿಖೆಯಾಗಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಸವರಾಜ ಮರಕುಂಬಿ ಮಾತನಾಡಿ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ ಬಳಕೆ ಮತ್ತು ಕೈಗೊಂಡಿರುವ ಕಾಮಗಾರಿಗಳ ವಿವರಗಳನ್ನು ಅಧಿಕಾರಿಗಳು ಕೂಡಲೇ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು. ಹಿಂದುತ್ವದ ಹೆಸರಿನಲ್ಲಿ ಮತ ಪಡೆದು, ದೇವಸ್ಥಾನಗಳ ಹೆಸರು ಹೇಳಿಕೊಂಡು ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಖಂಡನೀಯ ಎಂದರು.
ತಾಲೂಕು ಕಾರ್ಯದರ್ಶಿ ಕೆ. ಹುಸೇನಪ್ಪ, ಪದಾಧಿಕಾರಿಗಳಾದ ಮಂಜುನಾಥ ಡಗ್ಗಿ, ಕೃಷ್ಣಪ್ಪ, ಮುತ್ತಣ್ಣ ದಾಸನಾಳ್, ಮುಖಂಡರಾದ ದುರುಗಪ್ಪ ದಾಸನಾಳ್, ದುರುಗೇಶ, ಮಂಜುನಾಥ ನಾಯಕ್, ಬಾಲಾಜಿ ಚಳ್ಳಾರಿ, ಎಂ.ಪಿ. ಷರೀಫ್, ದರ್ಶನ ಹೊಸ್ಕೇರಾ ಹಾಗೂ ಮಾರುತಿ ವಿಠಲಾಪುರ ಇತರರಿದ್ದರು.