ಕುಷ್ಟಗಿಯ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಉದ್ಘಾಟಿಸಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಇತರರಿದ್ದರು.  
ಕೊಪ್ಪಳ

ಮಾನವ ಹಕ್ಕುಗಳ ರಕ್ಷಣೆಯಾಗಲಿ

ಪ್ರವೀಣ ಉದುಸಾ ದಲಬಂಜನ್
ಕುಷ್ಟಗಿ: ಮೂಲಭೂತ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾನವ ಹಕ್ಕುಗಳ ದಿನ ಆಚರಿಸಲಾಗುತ್ತಿದೆ ಎಂದು ಇಲ್ಲಿನ ಜಿಎಂಫ್‌ಸಿ ಕೋರ್ಟ್‌ನ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಹೇಳಿದರು.
ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಅಪರಾಧ ತಡೆ ಮಾಸಾಚರಣೆ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಗೆ ಜನ್ಮದತ್ತವಾಗಿ ಬಂದಿರುವ ಸ್ವಾತಂತ್ರ್ಯ, ಸಮಾನತೆ, ಗೌರವ, ನ್ಯಾಯ ಇತ್ಯಾದಿ ಮೂಲಭೂತ ಹಕ್ಕುಳಿಗೆ ಧಕ್ಕೆಯಾಗದಂತೆ ಸರ್ಕಾರಗಳು, ಸಂಸ್ಥೆಗಳು ಹಾಗೂ ನಾಗರಿಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಮಾತನಾಡಿ, 1948ರ ಡಿ. 10ರಂದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿದ ನಂತರ, 1950ರ ವೇಳೆಗೆ ಈ ದಿನವನ್ನು ಅಧಿಕೃತವಾಗಿ ಮಾನವ ಹಕ್ಕುಗಳ ದಿನವೆಂದು ಆಚರಿಸಲು ಕರೆ ನೀಡಲಾಯಿತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಮಾನವ ಮೌಲ್ಯಗಳನ್ನು ಸ್ಮರಿಸುವ ಪ್ರಮುಖ ವಾರ್ಷಿಕ ಆಚರಣೆಯಾಗಿದೆ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆ ಕುರಿತಂತೆ ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಸಿಪಿಐ ಯಶವಂತ ಬಿಸನಳ್ಳಿ, ಕುಷ್ಟಗಿ ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ನಾಯಕ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಎಲ್. ರಾಯನಗೌಡ, ಇಂದಿರಾ ಸುಹಾಸಿನಿ, ಅಪರ ಸರ್ಕಾರಿ ವಕೀಲ ಪರಸಪ್ಪ ಗುಜಮಾಗಡಿ, ಪಿಎಸ್‌ಐ ಪುಂಡಲೀಕಪ್ಪ ಇತರರು ಇದ್ದರು. ಕೃಷ್ಣಗಿರಿ ಕಾಲನಿಯ ಸ.ಹಿ.ಪ್ರೌ.ಶಾಲೆಯ ಶಿಕ್ಷಕ ರಾಜಮಹ್ಮದ್ ಕೋಳೂರು ಉಪನ್ಯಾಸ ನೀಡಿದರು.