ಮೋರನಾಳ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಕುಷ್ಠರೋಗ ಅರಿವು ಆಂದೋಲನ ತಂಡ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿತು.  
ಕೊಪ್ಪಳ

ಚಿಕಿತ್ಸೆ ಪಡೆದರೆ ಕುಷ್ಠರೋಗ ನಿಯಂತ್ರಣ

ನರೇಶ್ ಕುಮಾರ್

ಅಳವಂಡಿ: ಕುಷ್ಠರೋಗವು ಯಾವುದೇ ಪಾಪ ಅಥವಾ ಶಾಪದಿಂದ ಬರುವ ಕಾಯಿಲೆಯಲ್ಲ. ಮೈಕೋಬ್ಯಾಕ್ಟೀರಿಯ ಲೇಪ್ರೇ ಎಂಬ ಸೂಕ್ಷ್ಮಾಣು ಜೀವಿಯಿಂದ ಹರಡಲಿದ್ದು, ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಪ್ರಕಾಶ ತಿಳಿಸಿದರು.

ಮೋರನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ ಆಯೋಜಿಸಿದ್ದ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಷ್ಠರೋಗದ ಬಗ್ಗೆ ಸಮಾಜದಲ್ಲಿ ಹಲವು ತಪ್ಪು ಕಲ್ಪನೆಗಳಿದ್ದು, ಹೋಗಲಾಡಿಸುವುದು ಅಗತ್ಯ. ರೋಗದ ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಪಡೆದರೆ ನಿಯಂತ್ರಿಸಿ, ಅಂಗವೈಕಲ್ಯವನ್ನು ತಡೆಯಬಹುದು. ರೋಗದ ಬಗ್ಗೆ ಭಯಪಡುವ ಬದಲು ಎಚ್ಚರಿಕೆವಹಿಸಬೇಕು ಎಂದರು. 
ಆರೋಗ್ಯ ನಿರೀಕ್ಷಣಾಧಿಕಾರಿ ಜಯಪ್ರಕಾಶ ಮಾತನಾಡಿ, ಕುಷ್ಠ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು ಎಂದರು. ಬಳಿಕ ತಂಡವು ಗ್ರಾಮದ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿತು. 
ಮುಖ್ಯಶಿಕ್ಷಕ ಈಶಪ್ಪ, ಸಿಆರ್‌ಪಿ ಬಸವರಾಜ, ಪಿಎಂಡಬ್ಲ್ಯು ವೀರಭದ್ರಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಜಯಪ್ರಕಾಶ, ಸಂಗಯ್ಯ ಕಂಟಿಮಠ, ರವೀಂದ್ರ ಕಮ್ಮಾರ, ಸುರೇಶ, ರಾಜಶೇಖರ ಹಂಚಿನಾಳ, ಆರೋಗ್ಯ ಸುರಕ್ಷಿತಾಧಿಕಾರಿ ರಾಜೇಶ್ವರಿ ಕಂಪ್ಲಿ, ಆಶಾ ಕಾರ್ಯಕರ್ತೆಯರಾದ ಅಂದಮ್ಮ, ಗವಿಸಿದ್ದಮ್ಮ ಇತರರಿದ್ದರು.