ಯಲಬುರ್ಗಾದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಮಿಳಾ ಎಂ. ಉದ್ಘಾಟಿಸಿದರು. ನ್ಯಾ.ಸಂಜುಕುಮಾರ ಪಚ್ಚಪೂರೆ, ತಾಲೂಕು ಆರೋಗ್ಯಾಧಿಕಾರಿ ಡಾ. ನೇತ್ರಾವತಿ ಹಿರೇಮಠ ಇತರರಿದ್ದರು.
- ನ್ಯಾ. ಪ್ರಮಿಳಾ ಎಂ. ಸಲಹೆ
- ಕಾನೂನು ಅರಿವು-ನೆರವು ಕಾರ್ಯಕ್ರಮ
ಯಲಬುರ್ಗಾ: ತಂಬಾಕು ಸೇವನೆಯು ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ ಕುಟುಂಬ ಹಾಗೂ ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಯುವಜನರು ತಂಬಾಕು ವ್ಯಸನದಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಮಿಳಾ ಎಂ. ಹೇಳಿದರು.
ಪಟ್ಟಣದ ಸರ್ಕಾರಿ ಶುಶೂಷಾ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಅಭಿಯೋಜನಾ ಇಲಾಖೆಗಳ ಸಹಯೋಗದಲ್ಲಿ ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸಾರ್ವಜನಿಕರಿಗೆ ಉಚಿತ ಕಾನೂನು ನೆರವು ಒದಗಿಸಲಾಗುತ್ತಿದ್ದು, ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಆರೋಗ್ಯ ಮತ್ತು ಕಾನೂನು ಜಾಗೃತಿ ಹೊಂದಿದ ಸಮಾಜ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಸರ್ಕಾರಿ ಶುಶೂಷಾ ಮಹಾವಿದ್ಯಾಲಯದ ಪ್ರಾಂಶುಪಾಲ ಎಚ್.ಬಿ.ರಾಮದುರ್ಗ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ತಂಬಾಕು ಮತ್ತು ಇತರ ದುಶ್ಚಟಗಳಿಂದ ದೂರವಿರುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ತಹಸೀಲ್ದಾರ್ ಪ್ರಕಾಶ ನಾಶಿ ಮಾತನಾಡಿ, ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಿದರೆ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಸಂಜುಕುಮಾರ ಪಚ್ಚಪೂರೆ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಎಸ್.ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ. ನೇತ್ರಾವತಿ ಹಿರೇಮಠ ಮಾತನಾಡಿದರು.
ಪಿಐ ಮೌನೇಶ್ವರ ಪಾಟೀಲ, ಸಹಾಯಕ ಸರ್ಕಾರಿ ಅಭಿಯೋಜಕ ರವಿಕುಮಾರ ಎಚ್., ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಸ್.ಎಸ್.ಹೊಂಬಳ, ಕಾರ್ಯದರ್ಶಿ ಮಹಾಂತೇಶ ಈಟಿ, ವಿದ್ಯಾರ್ಥಿಗಳು, ಉಪನ್ಯಾಸಕರು, ವಕೀಲರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.