ಹನುಮಸಾಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪಿಯು ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ ಆರ್. ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಪ್ರಾಚಾರ್ಯ ಭೀಮಪ್ಪ ಗೊಲ್ಲರ, ಪಿಎಸ್‌ಐ ಧನುಂಜಯ ಹಿರೇಮಠ ಇತರರಿದ್ದರು.
- ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ ಆರ್. ಸಲಹೆ
- ಕಾನೂನು ಅರಿವು-ನೆರವು ಕಾರ್ಯಕ್ರಮ
ಹನುಮಸಾಗರ: ವಿದ್ಯಾರ್ಥಿಗಳು ಕಲಿಕೆಯಲ್ಲಿ ಎದುರಾಗುವ ಕೆಟ್ಟ ವಿಚಾರಗಳನ್ನು ಬದಿಗೊತ್ತಿ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ ಆರ್. ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪಿಯು ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯುವ ಪೀಳಿಗೆ ಕಾನೂನಿನ ಸಾಮಾನ್ಯ ಅರಿವು ಹೊಂದಿರಬೇಕು. ತಂದೆ-ತಾಯಿ ನಿಮ್ಮ ಮೇಲೆ ಇಟ್ಟುಕೊಂಡಿರುವ ಆಶಾ ಭಾವನೆಗೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕು. ಮನಸ್ಸು ಹಾಗೂ ಚಿಂತನೆಗಳು ಸದೃಢವಾಗಿಟ್ಟುಕೊಂಡು ಸದಾ ಉತ್ಸಾಹಿಗಳಾಗರಬೇಕು. ಅತಿಯಾದ ಮೊಬೈಲ್ ಬಳಕೆಯಿಂದ ಅಮೂಲ್ಯ ಸಮಯ ವ್ಯಯವಾಗುತ್ತಿದ್ದು ಇದನ್ನು ಶೈಕ್ಷಣಿಕ ಪ್ರಗತಿಗೆ ಬಳಸಿಕೊಳ್ಳಬೇಕು. ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಜನರ ಒಳಿತಿಗಾಗಿ ಕಾನೂನು ಮಾಡಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಕಾನೂನು ಪಾಲನೆ ಮಾಡಬೇಕು ಎಂದರು.
ವಕೀಲ ಪಿ. ರಮೇಶ ಮ್ಯಾತ್ರಿ, ಪೋಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಪ್ರಾಚಾರ್ಯ ಭೀಮಪ್ಪ ಗೊಲ್ಲರ, ಪಿಎಸ್‌ಐ ಧನುಂಜಯ ಹಿರೇಮಠ, ವಕೀಲರಾದ ಶಶಿಧರ ಶೆಟ್ಟರ್, ವಿಜಯಮಹಾಂತೇಶ ಕುಷ್ಟಗಿ, ಶಿವಕುಮಾರ ಚಿನಿವಾಲರ, ಲಿಂಗರಾಜ ಅಗಸಿಮುಂದಿನ, ಆನಂದ ಡೊಳ್ಳಿನ, ಉಪನ್ಯಾಸಕ ಲಕಪತಿ ರಾಠೋಡ, ಸಿಆರ್‌ಪಿ ಲೆಂಕಪ್ಪ ವಾಲಿಕಾರ ಇತರರಿದ್ದರು.