ಕೇಂದ್ರ-ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಜಂಟಿ ಕಾರ್ಮಿಕ ಸಂಟನೆಗಳ ಪ್ರಮುಖರು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಎಂ.ಬಿ.ನಾಗಡೌಡ, ಬಸವರಾಜ ಶೀಲವಂತರ, ಡಿ.ಎಚ್. ಪೂಜಾರ, ಹನುಮೇಶ ಕಲ್ಮಂಗಿ, ಶರಣು ಪಾಟೀಲ್, ಸುಂಕಪ್ಪ ಗದಗ, ಶರಣು ಗಡ್ಡಿ ಇದ್ದರು.
- ವಿವಿಧ ಸಂಟನೆಗಳ ಮುಖಂಡರು ಬೃಹತ್ ಪ್ರತಿಭಟನೆ
ಕೊಪ್ಪಳ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ಖಂಡಿಸಿ ಜಂಟಿ ಕಾರ್ಮಿಕ ಸಂಟನೆಗಳ ಒಕ್ಕೂಟದಿಂದ ಗುರುವಾರ ಕರೆ ನೀಡಿದ್ದ ಅಖಿಲ ಭಾರತ ಬಂದ್ ಅಂಗವಾಗಿ ವಿವಿಧ ಸಂಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಕಾರ್ಮಿಕರು, ರೈತರು, ಯುವಜನರು, ಮಹಿಳೆಯರು ಹಾಗೂ ವಿವಿಧ ದುಡಿವ ವರ್ಗಗಳ ಸಾವಿರಾರು ಜನರು ಭಾಗವಹಿಸಿ ಶಕ್ತಿ ಪ್ರದರ್ಶಿಸಿದರು. ಕೇಂದ್ರೀಯ ಬಸ್ ನಿಲ್ದಾಣದಿಂದ ಅಶೋಕ ವೃತ್ತವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಶೋಕ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಮುಷ್ಕರ ಹಿನ್ನೆಲೆಯಲ್ಲಿ ಬಂದ್ಗೆ ಕರೆ ನೀಡಿದ್ದರೂ ಜನ ಅಷ್ಟಾಗಿ ಬೆಂಬಲ ನೀಡಲಿಲ್ಲ. ಜವಾಹರ ರಸ್ತೆಯಲ್ಲಿ ಕೆಲ ಅಂಗಡಿಕಾರರು ಅಂಗಡಿ ಬಂದ್ ಮಾಡಿ ಬೆಂಬಲ ನೀಡಿದ್ದು ಕಂಡುಬಂತು. ಬಹುಪಾಲು ಅಂಗಡಿ, ಮುಂಗಟ್ಟೆಗಳು ತೆರೆದಿದ್ದವು. ಬ್ಯಾಂಕ್, ಸಾರಿಗೆ, ಹೋಟೆಲ್ ಸೇರಿ ಇನ್ನಿತರ ಸೇವೆಗಳು ಎಂದಿನಂತಿದ್ದವು.
ನಾಲ್ಕು ಕಾರ್ಮಿಕ ಸಂಹಿತೆಗಳು ದುಡಿವ ಜನರಿಗೆ ಮರಣ ಶಾಸನ. ಕಾರ್ಮಿಕರ ಹಕ್ಕು ಕಿತ್ತಿಕೊಳ್ಳಲಿವೆ. ಮುಷ್ಕ, ಸಾಮೂಹಿಕ ಚೌಕಾಸಿ, ಉದ್ಯೋಗ ಭದ್ರತೆ, ಆರೋಗ್ಯ ಮತ್ತು ಸುರಕ್ಷತೆ ಹಕ್ಕುಗಳಿಗೆ ಧಕ್ಕೆ ಉಂಟಾಗಲಿದೆ. ರೈಲ್ವೆ, ಬಂದರು, ಬ್ಯಾಂಕ್, ವಿಮೆ, ವಿದ್ಯುತ್, ಸಾರಿಗೆ, ದೂರಸಂಪರ್ಕ, ರಕ್ಷಣಾ ಉತ್ಪಾದನೆ, ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುತ್ತಿರುವುದು ಖಂಡನೀಯ. ನರೇಗಾ ದುರ್ಬಲ ಸಹಿಸಲಾಗದು ಎಂದು ಕಿಡಿ ಕಾರಿದರು.
ಕಾರ್ಮಿಕ ನಾಯಕರಾದ ಎಂ.ಬಿ.ನಾಗಡೌಡ, ಬಸವರಾಜ ಶೀಲವಂತರ, ಡಿ.ಎಚ್. ಪೂಜಾರ, ಹನುಮೇಶ ಕಲ್ಮಂಗಿ, ಶರಣು ಪಾಟೀಲ್, ಸುಂಕಪ್ಪ ಗದಗ, ಶರಣು ಗಡ್ಡಿ, ಆಶಾ, ಅಂಗನವಾಡಿ, ಬಿಸಿಯೂಟ, ಹಾಸ್ಟೆಲ್ ಅಡುಗೆ ಸಹಾಯಕ ಮಹಿಳಾ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು, ದೇವದಾಸಿ ಮಹಿಳೆಯರು, ಪಂಚಾಯತಿ ನೌಕರರು, ಕೈಗಾರಿಕಾ ಕಾರ್ಮಿಕರು ಇತರರಿದ್ದರು.