- ಹೆಚ್ಚುವರಿ ಅನುದಾನ ನಿರೀಕ್ಷೆ
- ಆಹಬೇಕಿದೆ ಅನುಷ್ಠಾನ ಸಮಿತಿ ನೇಮಕ
ಕೊಪ್ಪಳ : ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಕನಸಿನ ಯೋಜನೆ ಜಾನಪದ ಲೋಕಕ್ಕೆ ಜಾಗದ್ದೇ ಸಮಸ್ಯೆ. ಮತ್ತೊಂದೆಡೆ ಮೀಸಲಿಟ್ಟ ಅನುದಾನವೂ ಕಡಿಮೆ ಇದೆ. ಜಿಲ್ಲಾಡಳಿತ ಸೂಕ್ತ ಸ್ಥಳ ಹುಡುಕಾಟದ ಜತೆಗೆ ಹೆಚ್ಚುವರಿ ಅನುದಾನದ ನಿರೀೆಯಲ್ಲಿದೆ.
ಕೊಪ್ಪಳ ಸಾಂಸತಿಕ ಹಿನ್ನೆಲೆ ಹೊಂದಿದ್ದು, ಕಲ್ಯಾಣ ಕರ್ನಾಟಕ ಜಿಲ್ಲೆಗಳ ಹೆಬ್ಬಾಗಿಲಾಗಿದೆ. ಕಕ ಜಿಲ್ಲೆಗಳು ರಾಜ್ಯದ ಇತರ ಜಿಲ್ಲೆಗಳಿಗಿಂತ ಭಿನ್ನ. ಕಲೆ, ಸಂಸತಿ, ಹೈಕ ಹೋರಾಟ, ನಾಡು ಕಂಡ ಅಗ್ರಗಣ್ಯ ಸಾಹಿತಿಗಳು, ನಾಟಕಕಾರರು, ಹೋರಾಟಗಾರರು ತವರೂರಾಗಿವೆ. ಅವುಗಳೆಲ್ಲವನ್ನೂ ಒಂದೆ ಸೂಡಿನಡಿ ತರಬೇಕೆಂಬ ದೃಷ್ಟಿಯಿಂದ ಎರಡು ವರ್ಷದ ಹಿಂದೆಯೇ ಬಜೆಟ್ನಲ್ಲಿ ಜಿಲ್ಲೆಗೆ ಜಾನಪದ ಲೋಕ ಘೋಷಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಕನ್ನಡ ಮತ್ತು ಸಂಸತಿ ಇಲಾಖೆ ಅನುಷ್ಠಾನ ಜವಾಬ್ದಾರಿ ಹೊತ್ತಿದೆ. ಬಜೆಟ್ನಲ್ಲಿ ಎರಡು ಕೋಟಿ ರೂ. ಅನುದಾನ ಘೋಷಿಸಿ ಮೀಸಲಿಡಲಾಗಿದೆ.
ಆದರೆ, ಯೋಜನೆ ಘೋಷಣೆಗೆ ಸೀಮಿತವಾಗಿದೆ. ಸೂಕ್ತ ಜಾಗದ ಕೊರತೆ ಒಂದೆಡೆಯಾದೆರೆ, ಅನುಷ್ಠಾನಕ್ಕೆ ಬೇಕಾದ ನಿಗದಿತ ಕ್ರಮಗಳನ್ನು ಕೈಗೊಳ್ಳದಿರುವುದು ಹಿನ್ನೆಡೆಗೆ ಕಾರಣವಾಗಿದೆ. ಹತ್ತಾರು ಕಡೆ ಜಾಗಕ್ಕಾಗಿ ಶೋಧನೆ ನಡೆದಿದೆ. ಕೊಪ್ಪಳ ಹೊರವಲಯದ ಹೊರತಟ್ನಾಳ ಬಳಿ 10 ಎಕರೆ ಜಾಗ ಗುರುತಿಸಲಾಗಿದೆ. ಆದರೆ, ಜನರು ಬಂದು ಹೋಗಲು ಅನುಕೂವಾಗುವಂಥ ಸ್ಥಳ ಅದಾಗಿಲ್ಲ. ಸಾರ್ವಜನಿಕರು ನಿತ್ಯ ಎಡತಾಕುವಂತ ಜಾಗ ಬೇಕೆಂಬುದು ಅಧಿಕಾರಿಗಳ ಅಂಬೋಣ. ಅದಕ್ಕಾಗಿ ಸೂಕ್ತ ಜಮೀನಿಗೆ ತಲಾಶ್ ನಡೆದಿದೆ. ಕೊಪ್ಪಳ ಸುತ್ತಮುತ್ತಲಿನ ಸರ್ಕಾರಿ ಜಾಗಗಳ ಶೋಧ ಮುಂದುವರೆದಿದ್ದು ಶ್ರೀ ಹಂಚಿಕೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾಯೋರ್ನ್ಮುಖವಾಗಿದೆ.
ಏನಿದು ಜಾನಪದ ಲೋಕ ?
ರಾಮನಗರದಲ್ಲಿ ಜಾನಪದ ಲೋಕ ನಿರ್ಮಿಸಿದ್ದು ಅದೇ ಮಾದರಿಯಲ್ಲಿ ಜಾರಿಗೆ ಯೋಜನೆ ರೂಪಿಸಲಾಗಿದೆ. ನಾಡಿನ ಪ್ರಮುಖ ಸಾಹಿತಿ, ಸಾಂಸತಿಕ ಚಿಂತರಕ ಪರಿಚಯ, ಗ್ರಾಮೀಣ ಜೀವನದ ಸೊಗಡಿನ ಅನಾವರಣ, ಕಲೆ, ಸಾಹಿತ್ಯ, ರಂಗಭೂಮಿ ಪರಿಚಯಿಸಲಾಗುತ್ತದೆ. ಬಯಲು ರಂಗ ಮಂದಿರ, ಶಿಬಿರಗಳು ಇನ್ನಿತರ ಸಾಂಸತಿಕ ಚಟುವಟಿಕೆಗಳು ನಡೆಯಲಿವೆ. ಕೊಪ್ಪಳ ಜಾನಪದ ಲೋಕದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸತಿ, ವೈಚಾರಿಕತೆ ಬಿಂಬಿಸಲು ಯೋಜಿಸಲಾಗಿದೆ. ಪ್ರಮುಖರ ಪರಿಚಯ, ಕಲಾತ್ಮಕ ಗೊಂಬೆಗಳು, ಬಯಲು ರಂಗಮಂದಿರ, ಸಾಹಿತಿಗಳು, ಇತಿಹಾಸ, ಹೋರಾಟದ ನೆನಪು ಬಿಂಬಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಿದೆ.
10 ಕೋಟಿ ರೂ. ಅವಶ್ಯ
ಯೋಜನೆ ಘೋಷಿಸಿದ್ದು ಅನುಷ್ಠಾನಕ್ಕೆ ಪ್ರತ್ಯೇಕ ಸಮಿತಿ ರಚನೆ ಅವಶ್ಯವಿದೆ. ರಂಗಾಯಣ ಮಾದರಿಯಲ್ಲಿ ಆಡಳಿತಾಧಿಕಾರಿ ಜತೆಗೆ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಮಿತಿ ಅಸ್ಥಿತ್ವಕ್ಕೆ ತರಬೇಕು. ಜಾನಪದ ಲೋಕ ಮಾದರಿ ಹೇಗಿರಬೇಕು, ಏನೇನು ಒಳಗೊಂಡಿರಬೇಕು ಎಂಬ ಬಗ್ಗೆ ಸಮಿತಿ ಸೂಕ್ತ ವರದಿ, ಕ್ರಿಯಾ ಯೋಜನೆ ತಯಾರಿಸಬೇಕು. ಬಳಿಕ ಅವುಗಳಿಗೆ ತಗಲುವ ಅನುದಾನದ ಅಂದಾಜು ದೊರೆಯಲಿದೆ. ಸದ್ಯ ಎರಡು ಕೋಟಿ ರೂ. ಮೀಸಲಿಡಲಾಗಿದೆ. ಕನಿಷ್ಠ 10 ಕೋಟಿ ರೂ. ಬೇಕೆಂಬುದು ಅಧಿಕಾರಿಗಳ ಅನಿಸಿಕೆ. ಇಲಾಖೆ ಸಮಿತಿ ರಚನೆ ಜತೆಗೆ ಅನುದಾನ ಒದಗಿಸಬೇಕಿದೆ.
ಜಾನಪದ ಲೋಕಕ್ಕೆ ಈಗ ಗುರುತಿಸಿದ ಜಾಗ ಅಷ್ಟಾಗಿ ಹೊಂದಾಣಿಕೆ ಆಗುವುದಿಲ್ಲ. ಹೀಗಾಗಿ ಬೇರೆ ಜಾಗಕ್ಕೆ ಹುಡುಕಾಟ ನಡೆದಿದೆ. ಸಾಂಸತಿಕ ಕಾರ್ಯವಾಗಿರವುದರಿಂದ ಪ್ರತ್ಯೇಕ ಅನುಷ್ಠಾನ ಸಮಿತಿ ರಚಿಸಬೇಕಿದ್ದು ಬೇಗ ನೇಮಕ ಮಾಡಲಾಗುವುದು. ಜತೆಗೆ ಹೆಚ್ಚುವರಿ ಅನುದಾನ ಅವಶ್ಯವಿದ್ದು, ಈ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ. ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆಯಲಾಗುವುದು.
ಜಾನಪದ ಲೋಕ ಯೋಜನೆ ಜಾರಿ ಮಾಡುತ್ತೇವೆ. ಎಲ್ಲೆಂದರಲ್ಲಿ ನಿರ್ಮಿಸಿದರೆ ಜನರಿಗೆ ಉಪಯೋಗ ಆಗುವುದಿಲ್ಲ. ಹೀಗಾಗಿ ಸಾರ್ವಜನಿಕರು ಸದಾ ಓಡಾಡುವಂಥ ಜಾಗದಲ್ಲಿ ನಿರ್ಮಿಸುತ್ತೇವೆ. ಜಿಲ್ಲಾಡಳಿತಕ್ಕೆ ಜಾಗ ಗುರುತಿಸಲು ಸೂಚಿಸಲಾಗಿದೆ. ಅಗತ್ಯ ಅನುದಾನ ಒದಗಿಸುತ್ತೇವೆ.
ಜಾನಪದ ಲೋಕ ಅನುಷ್ಠಾನ ಸಮಿತಿ ರಚಿಸಬೇಕಿದೆ. ಹೆಚ್ಚುವರಿ ಅನುದಾನ ಅವಶ್ಯವಿದ್ದು ಪ್ರಸ್ತಾವನೆ ಸಲ್ಲಿಸಲಾಗುವುದು. ಜಾಗದ ಸಮಸ್ಯೆ ಇದ್ದು ಈ ಬಗ್ಗೆ ಜಿಲ್ಲಾಡಳಿತ, ಸಚಿವರ ಗಮನಕ್ಕೆ ತರಲಾಗಿದೆ.