ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ನ ವಿಟಿಯುನಲ್ಲಿ ಆಯೋಜಿಸಿದ್ದ ಜಲಧರಗಳ ನಕಾಶೀಕರಣ, ಅಂತರ್ಜಲ ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ ಕುರಿತ ಶ್ರೇಣಿ- 3ರ ತರಬೇತಿ ಕಾರ್ಯಾಗಾರವನ್ನು ಕೇಂದ್ರೀಯ ಅಂತರ್ಜಲ ಮಂಡಳಿ ನೈಋತ್ಯ ಕ್ಷೇತ್ರದ ಪ್ರಾದೇಶಿಕ ನಿರ್ದೇಶಕ ಜಿ.ಕೃಷ್ಣಮೂರ್ತಿ ಉದ್ಘಾಟಿಸಿದರು. ವಿಟಿಯು ಸ್ನಾತಕೋತ್ತರ ಕೇಂದ್ರದ ಉಪ ನಿರ್ದೇಶಕ ಡಾ. ಬಸವರಾಜಪ್ಪ ವೈ.ಎಚ್., ಗದಗ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಕೆ. ಲೋಕೇಶ್ ಇದ್ದರು.
ಕೊಪ್ಪಳ : ಹೆಚ್ಚುತ್ತಿರುವ ಜನಸಂಖ್ಯೆ, ಗ್ರಾಮೀಣ ಕುಡಿಯುವ ನೀರಿನ ಭದ್ರತೆ ಹಾಗೂ ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಸೀಮಿತವಾಗಿರುವ ಅಂತರ್ಜಲ ಸಂಪನ್ಮೂಲವನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕೇಂದ್ರೀಯ ಅಂತರ್ಜಲ ಮಂಡಳಿ ನೈಋತ್ಯ ಕ್ಷೇತ್ರದ ಪ್ರಾದೇಶಿಕ ನಿರ್ದೇಶಕ ಜಿ.ಕೃಷ್ಣಮೂರ್ತಿ ಹೇಳಿದರು.
ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ನ ವಿಟಿಯು ಕ್ಯಾಂಪಸ್ನಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯಿಂದ ಆಯೋಜಿಸಿದ್ದ ಜಲಧರಗಳ ನಕಾಶೀಕರಣ, ಅಂತರ್ಜಲ ಸಂಬಂಧಿತ ಸಮಸ್ಯೆಗಳು ಮತ್ತು ಅಂತರ್ಜಲ ನಿರ್ವಹಣೆ ಕುರಿತ ಶ್ರೇಣಿ- 3ರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಅಂತರ್ಜಲದ ವೈಜ್ಞಾನಿಕ ನಿರ್ವಹಣೆಗೆ ಜಲಧರಗಳ ನಕಾಶೀಕರಣ ಅಧ್ಯಯನಗಳ ಫಲಿತಾಂಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಕೃತಕ ಮರುಪೂರಣ, ಜಲ ಸಂರಕ್ಷಣೆ ಹಾಗೂ ಅಂತರ್ಜಲದ ಮಿತ ಬಳಕೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ವಿಭಾಗಗಳ ನಡುವಿನ ಸಮನ್ವಯ ಹಾಗೂ ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದಿಂದ ಮಾತ್ರ ಸುಸ್ಥಿರ ಅಂತರ್ಜಲ ನಿರ್ವಹಣೆ ಸಾಧ್ಯ. ಅಂತರ್ಜಲ ಸಂರಕ್ಷಣೆಗೆ ಸ್ಥಳಿಯ ಮಟ್ಟದಲ್ಲಿಯೇ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ತಾಂತ್ರಿಕ ಗೋಷ್ಠಿಗಳಲ್ಲಿ ಅಂತರ್ಜಲ ನಕಾಶೀಕರಣ, ವೈಜ್ಞಾನಿಕ ಅಂತರ್ಜಲ ಅನ್ವೇಷಣೆ, ದೂರ ಸಂವೇದಿ ಮತ್ತು ಜಿಐಎಸ್ ತಂತ್ರಜ್ಞಾನ ಹಾಗೂ ಪರಿಸರ ಸಂರಕ್ಷಣೆ ಕುರಿತು ತಜ್ಞರು ಮಾಹಿತಿ ನೀಡಿದರು. ತರಬೇತಿ ಕೊನೆಯಲ್ಲಿ ಸ್ಥಳಿಯ ಅಂತರ್ಜಲ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಮುಕ್ತ ಸಂವಾದ ನಡೆಯಿತು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ವಿಟಿಯು ಸ್ನಾತಕೋತ್ತರ ಕೇಂದ್ರದ ಉಪ ನಿರ್ದೇಶಕ ಡಾ. ಬಸವರಾಜಪ್ಪ ವೈ.ಎಚ್., ಗದಗ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಕೆ. ಲೋಕೇಶ್, ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಹುಣಶ್ಯಾಳ, ಹಿರಿಯ ಭೂವಿಜ್ಞಾನಿ ವಿ. ಬಸವಂತ್ ಇತರರಿದ್ದರು.