ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿರು ಕೊಪ್ಪಳ ವಿವಿ.
- ಗುತ್ತಿಗೆ ನೌಕರರೇ ಆಧಾರ
- 3 ವರ್ಷಗಳಾದರು ಮುಗಿಯದ ಭವಣೆ
ಕೊಪ್ಪಳ : ಕಲ್ಯಾಣ ಕರ್ನಾಟಕ ಭಾಗದ ಉನ್ನತ ಶಿಕ್ಷಣಾಭಿವೃದ್ಧಿಗೆ ಮಹತ್ವಾಕಾಂಕ್ಷಿಯಾಗಿ ಸ್ಥಾಪನೆಯಾದ ಕೊಪ್ಪಳ ವಿಶ್ವವಿದ್ಯಾಲಯ ಆರಂಭವಾಗಿ ಮೂರು ವರ್ಷಗಳಾದರೂ, ಶಾಶ್ವತ ಆಡಳಿತ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಇನ್ನೂ ಸಂಕಷ್ಟದಲ್ಲೇ ಸಾಗುತ್ತಿದೆ. ಶಾಶ್ವತ ಹುದ್ದೆಗಳ ಭರ್ತಿ, ಸ್ವಂತ ಕಟ್ಟಡ ನಿಮಾರ್ಣ ಮತ್ತು ಸಮರ್ಪಕ ಸರ್ಕಾರಿ ಅನುದಾನಗಳ ಅಭಾವದಿಂದ ವಿವಿಯ ಅಭಿವೃದ್ಧಿಗೆ ಅಡ್ಡಿಯಾಗಿದೆ.
ಪ್ರಸ್ತುತ ಕುಲಪತಿ ಮತ್ತು ಮೌಲ್ಯಮಾಪನ ಕುಲಸಚಿವ ಹೊರತುಪಡಿಸಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ತಾತ್ಕಾಲಿಕ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ಮಂಜೂರಾಗಿರುವ ಸ್ಯಾಂಕ್ಷನ್ ಪೋಸ್ಟ್ಗಳ ಸಂಖ್ಯೆ ಕೇವಲ 34 ಮಾತ್ರ. ಸರ್ಕಾರದ ಆದೇಶದಂತೆ ಈ ಹುದ್ದೆಗಳ ಶೇ.60 ರಷ್ಟು ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆಯೇ ನೇಮಕ ಮಾಡಿಕೊಂಡು ಆಡಳಿತ ನಡೆಸಬೇಕಾಗಿದೆ. ಇದರಿಂದ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳು ತಾತ್ಕಾಲಿಕ ಸಿಬ್ಬಂದಿಯನ್ನೇ ಅವಲಂಬಿಸಿವೆ.
ಶಾಶ್ವತ ಸಿಬ್ಬಂದಿ ಕೊರತೆಯಿಂದ ಆಡಳಿತಾತ್ಮಕ ನಿರ್ಧಾರಗಳ ಅನುಷ್ಠಾನ, ಶೈಕ್ಷಣಿಕ ಗುಣಮಟ್ಟ ಹಾಗೂ ವಿದ್ಯಾರ್ಥಿ ಸೇವೆಗಳಲ್ಲಿ ನಿರಂತರತೆ ಕಾಪಾಡುವುದು ಕಷ್ಟಕರವಾಗಿದೆ. ಅಕಾಡೆಮಿಕ್ ಕುಲಸಚಿವ ಹುದ್ದೆ ಖಾಲಿ ಇದ್ದು, ಅತಿಥಿ ಉಪನ್ಯಾಸಕರ ಮೇಲೆಯೇ ಶಿಕ್ಷಣ ವ್ಯವಸ್ಥೆ ನಿಂತಿದೆ. ಆಗಸ್ಟ್ನಲ್ಲಿ ಕುಲಪತಿಗಳು ನಿವೃತ್ತಿಯಾಗಲಿರುವ ಹಿನ್ನೆಲೆ ಆಡಳಿತ ಭವಿಷ್ಯದ ಬಗ್ಗೆ ಆತಂಕವೂ ವ್ಯಕ್ತವಾಗಿದೆ.
ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ಶುಲ್ಕವೇ ಆಡಳಿತ ನಿರ್ವಹಣೆಗೆ ಪ್ರಮುಖ ಆಧಾರವಾಗಿದೆ. ಇದೇ ಹಣದಿಂದ ಸಿಬ್ಬಂದಿ ವೇತನ ಹಾಗೂ ಇತರೆ ವೆಚ್ಚಗಳನ್ನು ಭರಿಸಲಾಗುತ್ತಿದೆ. ಸರ್ಕಾರದಿಂದ ಶಾಶ್ವತ ಅನುದಾನ ಮತ್ತು ನಿಯಮಿತ ಹುದ್ದೆಗಳಿಲ್ಲದೆ ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ಕಷ್ಟ ಎನ್ನಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆಯಾದ ಈ ವಿಶ್ವವಿದ್ಯಾಲಯವನ್ನು ಬಲಿಷ್ಠಾವಾಗಿ ಬೆಳೆಸುವುದು ಸರ್ಕಾರ, ಜಿಲ್ಲಾಡಳಿತ ಮತ್ತು ಸ್ಥಳಿಯ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಆದರೆ ವಿವಿಯ ಮೂಲಭೂತ ಸಮಸ್ಯೆಗಳ ಪರಿಹಾರದಲ್ಲಿ ನಿರೀಕ್ಷಿತ ಮಟ್ಟದ ಚಟುವಟಿಕೆ ಕಾಣುತ್ತಿಲ್ಲ ಎಂಬ ಟೀಕೆಗಳಿಗೆ ತುತ್ತಾಗಿದೆ. ಸ್ಥಳಿಯರು ಮತ್ತು ಶಿಕ್ಷಣಾಸಕ್ತರು ಸರ್ಕಾರ ತಕ್ಷಣವೇ ಶಾಶ್ವತ ಹುದ್ದೆಗಳ ಭರ್ತಿ, ವಿಶೇಷ ಅಭಿವೃದ್ಧಿ ಅನುದಾನ ಬಿಡುಗಡೆ, ಶಾಶ್ವತ ಕಟ್ಟಡ ನಿಮಾರ್ಣ ಹಾಗೂ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಸ್ವಂತ ಕಟ್ಟಡದ ಕನಸು ಇನ್ನೂ ಕನಸೇ
ಕೊಪ್ಪಳ ನಗರದಿಂದ ಸುಮಾರು ಎರಡು ಕಿಲೋಮೀಟರ್ ದೂರದ ಮಂಗಳಾಪುರ ಕ್ರಾಸ್ ಬಳಿ ವಿಶ್ವವಿದ್ಯಾಲಯದ ಶಾಶ್ವತ ಕಟ್ಟಡ ನಿಮಾರ್ಣಕ್ಕಾಗಿ ಜಾಗ ಗುರುತಿಸಲಾಗಿದೆ. ಆದರೆ ಈವರೆಗೂ ಕಟ್ಟಡ ನಿಮಾರ್ಣದ ಕುರಿತು ಸ್ಪಷ್ಟ ಯೋಜನೆ ಆರಂಭವಾಗಿಲ್ಲ. ಸ್ವಂತ ಕಟ್ಟಡದ ಕೊರತೆಯಿಂದ ವಿದ್ಯಾರ್ಥಿಗಳಿಗೆ ಅಗತ್ಯವಾದ ಪ್ರಯೋಗಾಲಯಗಳು, ತಾಂತ್ರಿಕ ಶಿಕ್ಷಣ ಸೌಲಭ್ಯಗಳು, ಸಂಶೋಧನಾ ಕೇಂದ್ರಗಳು ಹಾಗೂ ಆಧುನಿಕ ಶೈಕ್ಷಣಿಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಮೀಣ ಹಾಗೂ ಹಿಂದುಳಿದ ಭಾಗದ ವಿದ್ಯಾರ್ಥಿಗಳು ಉತ್ತಮ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಹಂಚಿಕೆಯಾಗದ ಸಿಬ್ಬಂದಿ
ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ ಕೊಪ್ಪಳ ವಿವಿ ವಿಭಜನೆಯಾದ ಮೊದಲು ಸಿಂಬ್ಬದಿ ಹಂಚಿಕೆಯಾಗಿತ್ತು. ಆದರೇ, ಮತ್ತೆ ಆ ಸಿಬ್ಬಂದಿ ಬಳ್ಳಾರಿ ವಿವಿಗೆ ವಾಪಾಸ್ ಹೊಗಿದ್ದರಿಂದ ಕೊಪ್ಪಳ ವಿವಿಗೆ ಗುತ್ತಿಗೆ ಸಿಬ್ಬಂದಿಯೇ ಆಧಾರವಾಗಿದ್ದಾರೆ. ಕೊಪ್ಪಳ ವಿವಿಯಲ್ಲಿ ಪ್ರಸ್ತುತ 12 ಬೋಧಕೇತರ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕೆಲಸಮಾಡುತ್ತಿದ್ದಾರೆ. ಬೋಧಕ ಸಿಬ್ಬಂದಿ 67 ಜನ ಅಥಿತಿ ಉಪನ್ಯಾಸಕರು ಕೆಲಸ ಮಾಡುತ್ತದ್ದಾರೆ. ಕೊಪ್ಪಳ ವಿವಿ ಕುಲಪತಿ, ಮತ್ತು ಮೌಲ್ಯಮಾಪನ ಕುಲಸಚಿವ ಹೊರತುಪಡಿಸಿ ಮಿಕ್ಕೇಲ್ಲಾ ಸಿಬ್ಬಂದಿ ತಾತ್ಕಾಲಿಕವಾಗಿದ್ದರಿಂದ ವಿವಿ ಆಗಾಗಾ ಚರ್ಚೆಗೆ ಬರುತ್ತಿದೆ.
"
ಶಾಶ್ವತ ಹುದ್ದೆಗಳ ಭರ್ತಿ, ಸ್ವಂತ ಕಟ್ಟಡ ನಿಮಾರ್ಣ ಹಾಗೂ ಹೆಚ್ಚುವರಿ ಅನುದಾನದ ಕುರಿತು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿವಿ ಕಟ್ಟಡಕ್ಕೆ ಮಂಗಳಾಪುರ ಕ್ರಾಸ್ ಬಳಿ ಜಾಗ ಗುರುತಿಸಿ ಡಿಸಿಯವರಿಗೆ ಪತ್ರ ಬರೆಯಲಾಗಿದ್ದು, ಅದು ಎಸಿ ಅವರ ಅಂತದಲ್ಲಿದೆ. ಸರ್ಕಾರದಿಂದ ಅಗತ್ಯ ಸಹಕಾರ ದೊರೆತರೆ ವಿಶ್ವವಿದ್ಯಾಲಯವನ್ನು ಮುಂದಿನ ದಿನಗಳಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪಿಸುವ ವಿಶ್ವಾಸವಿದೆ.
— ಪ್ರೋ. ಎಸ್.ವಿ.ಡಾಣಿ. ಕುಲಪತಿ ವಿವಿ ಕೊಪ್ಪಳ.
"
ವಿವಿಯು ಸದ್ಯ ಸೀಮಿತ ಸಿಬ್ಬಂದಿ ಮತ್ತು ಸಂಪನ್ಮೂಲಗಳ ನಡುವೆಯೂ ಶೈಕ್ಷಣಿಕ ಹಾಗೂ ಪರೀಕ್ಷಾ ಕಾರ್ಯಗಳನ್ನು ಕಾರ್ಯ ಮಾಡುತ್ತಿದೆ. ಆದರೆ ಶಾಶ್ವತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಆಡಳಿತ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ. ಹೊರಗುತ್ತಿಗೆ ಹಾಗೂ ತಾತ್ಕಾಲಿಕ ಸಿಬ್ಬಂದಿಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ.
— ರಮೇಶ ಕೆ. ಮೌಲ್ಯಮಾಪನ ಕುಲಸಚಿವ ವಿವಿ ಕೊಪ್ಪಳ.