ಕುಕನೂರು ತಾಲೂಕಿನ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ನಲ್ಲಿರುವ ಕೊಪ್ಪಳ ವಿವಿ.
- 7.90 ಕೋಟಿ ರೂ. ಖರ್ಚಿಗೆ ಕೊಪ್ಪಳ ವಿವಿ ನಿರುತ್ಸಾಹ
- ವಿಟಿಯುಗೆ ಹಣ ವರ್ಗಾಯಿಸಲು ಸೂಚನೆ
ಕೊಪ್ಪಳ: ರಾಜ್ಯದ ಪ್ರಮುಖ ವಿವಿಗಳು ಸರ್ಕಾರ ಅನುದಾನ ನೀಡುತ್ತಿಲ್ಲವೆಂದು ಕೊರಗುತ್ತಿವೆ. ಆದರೆ, "ದೇವರು ಕೊಟ್ಟರೂ ಪೂಜಾರಿ ಕೊಡುತ್ತಿಲ್ಲ' ಎಂಬಂತೆ ಕೊಪ್ಪಳ ವಿವಿ ಅಭಿವೃದ್ಧಿಗೆ ಎರಡು ವರ್ಷದ ಹಿಂದೆ ಬಂದ 7.90 ಕೋಟಿ ರೂ. ಖರ್ಚು ಮಾಡದೇ ಬೇಜವಾಬ್ದಾರಿ ಮೆರೆಯುತ್ತಿದೆ. ಖಜಾನೆಯಲ್ಲೇ ಹಣ ಕೊಳೆವುದನ್ನು ಕಂಡು ಬೇಸತ್ತ ಸರ್ಕಾರ ಕಲಬುರಗಿ ವಿಟಿಯುಗೆ ವರ್ಗಾಯಿಸುವಂತೆ ತಾಕೀತು ಮಾಡಿರುವುದು ಖೇದಕರ.
ಕಳೆದ ಬಿಜೆಪಿ ಸರ್ಕಾರ ಕೊಪ್ಪಳ ಸೇರಿ ರಾಜ್ಯದ ಏಳು ಜಿಲ್ಲೆಗಳಿಗೆ ತಲಾ ಒಂದು ಹೊಸ ವಿವಿ ಘೋಷಿಸಿದೆ. ಆದರೆ, ಸೂಕ್ತ ಜಾಗ, ಮಾನವ ಸಂಪನ್ಮೂಲ, ಅನುದಾನ ನೀಡಿಲ್ಲ. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೂ ವಿವಿಗಳನ್ನು ಮುಚ್ಚಲು ಸಮಿತಿ ರಚಿಸಿ ಶಿಕ್ಷಣ ವಿರೋಧಿ ನಡೆ ಅನುಸರಿಸಿದೆ. ವಿರೋಧ ವ್ಯಕ್ತವಾಗುತ್ತಲೇ ತಕ್ಷಣಕ್ಕೆ ತಟಸ್ಥ ನೀತಿ ಮೊರೆ ಹೋಗಿದೆ. ಜಿಲ್ಲಾ ಕೇಂದ್ರ ಕೊಪ್ಪಳ ಬಿಟ್ಟು ಕುಕನೂರು ತಾಲೂಕಿನ ತಳಕಲ್ ಸರ್ಕಾರಿ ಇಂಜಿನಯರಿಂಗ್ ಕಾಲೇಜು ಕಟ್ಟದ ಒಂದು ಭಾಗದಲ್ಲಿ ಕೊಪ್ಪಳ ವಿವಿ ತಾತ್ಕಾಲಿಕ ನೆಲೆ ಕಂಡುಕೊಂಡಿದೆ.
ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು. ಸ್ವಂತ ಕಟ್ಟಡ ಹೊಂದಬೇಕು. ಹತ್ತಾರು ಹೊಸ ಕೋರ್ಸ್, ಸಂಶೋಧನೆಗಳು, ಜಿಲ್ಲೆಯ ಶೈಕ್ಷಣಿಕ ಪ್ರಗತಿ, ಬಡ, ಮಧ್ಯಮ ವರ್ಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ನೆರವಾಗಬೇಕೆಂಬ ಕನಸು ಪಂಚವಾರ್ಷಿಕ ಯೋಜನೆಯಂತೆ ಆಮೆ ವೇಗದಲ್ಲಿವೆ. ಟಿಕೋತ್ಸವ, ದಾಖಲಾತಿ, ಪರೀೆ, ಸಿಬ್ಬಂದಿ ನೇಮಕ ಸೇರಿ ಎಲ್ಲವೂ ಗೊಂದಲ, ವಿವಾದದ ಗೂಡಾಗುತ್ತಿವೆ. ಪ್ರಮುಖ ಹುದ್ದೆ ಹೊರತುಪಡಿಸಿ ಉಳಿದವರೆಲ್ಲ ಗುತ್ತಿಗೆ ನೌಕರರು. ಅತಿಥಿ ಉಪನ್ಯಾಸಕರ ಬಣ ಬಡಿದಾಟ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಮಂಕಾಗಿಸುತ್ತಿದೆ.
ಈ ನಡುವೆ ಸಂಶೋಧನೆ ಸೇರಿ ಇತರ ಕಾರ್ಯಕ್ಕೆ ಬಂದ ಕೋಟ್ಯಂತರ ರೂ. ಅನುದಾನ ಬಳಸದೇ ಖಜಾನೆಯಲ್ಲಿ ಕೊಳೆಸುತ್ತಿರುವುದು ಬೆಳಕಿಗೆ ಬಂದಿದೆ. ಆಡಳಿತ ವರ್ಗ ತನ್ನ ರ್ನಿಲಕ್ಷ$್ಯದಿಂದ ಕೈಯಲ್ಲಿ ಹಣವಿದ್ದರೂ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ವಿದ್ಯಾರ್ಥಿಗಳು, ಜಿಲ್ಲೆಯ ಜನತೆಗೆ ಮೋಸ ಮಾಡುತ್ತಿರುವುದು ಬೇಸರದ ಸಂಗತಿ.
ಸಕಾರಣವೇ ಇಲ್ಲ
ವಿಜ್ಞಾನ ವಿಭಾಗಗಳಲ್ಲಿನ ಸಂಶೋಧನಾ ಕಾರ್ಯಚಟುವಟಿಕೆಗಳಿಗೆ 7.90 ಕೋಟಿ ರೂ. 2024ರಲ್ಲೇ ಬಂದಿದೆ. ಎಸ್ಸಿಪಿ&ಟಿಎಸ್ಪಿ ಅನುದಾನದಡಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಿಡುಗಡೆ ಆಗಿದೆ. ಎರಡು ವರ್ಷವಾದರೂ ಯೋಜನೆ ಕಾರ್ಯಗತಗೊಂಡಿಲ್ಲ. ಈ ಹಿಂದೆ ಇದ್ದ ಕುಲಪತಿ ಡಾ.ಬಿ.ಕೆ.ರವಿ ಅವರೂ ಆಸಕ್ತಿ ತೋರಿಲ್ಲ. ತದ ನಂತರ ಬಂದ ಡಾ.ಎಸ್.ವಿ.ಡಾಣಿ ಅವರೂ ಕೈಕಟ್ಟಿ ಕುಳಿತಿದ್ದಾರೆ. ವರುಷಗಳು ಉರುಳಿದರೂ ಹಣ ರ್ಖಚಾಗದ ಕಾರಣ ಕಲಬುರಗಿ ವಿಟಿಯುಗೆ ವರ್ಗಾಯಿಸುವಂತೆ ಮಂಡಳಿ ಸೂಚಿಸಿದೆ. ಈ ಸಂಬಂಧ ಪತ್ರ ಬರೆದು ಅನುದಾನ ಪರಭಾರೆಗೆ ತಾಕೀತು ಮಾಡಿದೆ.
ಸದ್ಬಳಕೆಗಿದೆ ಹತ್ತಾರು ಮಾರ್ಗ
ಸಂಶೋಧನಾ ಕಾರ್ಯಕ್ಕೆ ಅನುದಾನ ಬಂದಿದ್ದು, ಸದ್ಯ ವಿವಿ ಮುಖ್ಯ ಕ್ಯಾಂಪಸ್ನಲ್ಲಿ ವಿಜ್ಞಾನ ವಿಭಾಗದ ಕೋರ್ಸ್ಗಳಿಲ್ಲ. ಯಲಬುರ್ಗಾ ಸ್ನಾತಕೋತ್ತರ ಕೇಂದ್ರದಲ್ಲಿ ವಿಜ್ಞಾನ ವಿಷಯಗಳ ಕೋರ್ಸ್ಗಳಿವೆ. ಯೋಜನೆ ಉದ್ದೇಶಕ್ಕೆ ತಕ್ಕಂತೆ ಅನುದಾನ ಬಳಕೆ ಮಾಡಲು ಅವಕಾಶವಿದೆ. ಇಲ್ಲದಿದ್ದಲ್ಲಿ ಯೋಜನೆ ಬದಲಾವಣೆಗೂ ಅವಕಾಶವಿದೆ. ಸ್ಥಳಿಯ ಜನಪ್ರತಿನಿಧಿಗಳ ಮೂಲಕ ಮಂಡಳಿಯೊಡನೆ ಪತ್ರವ್ಯವಹಾರ ನಡೆಸಿ ವಿವಿ ಪ್ರಗತಿಗೆ ಪೂರಕ ಯೋಜನೆ ಅನುಷ್ಠಾನಗೊಳಿಸಿದಲ್ಲಿ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಜಿಲ್ಲೆಯ ಪ್ರಗತಿಗೂ ಪೂರಕ.
ಜನಪ್ರತಿನಿಧಿಗಳು ಚಿತ್ತ ಹರಿಸಲಿ
ಜಿಲ್ಲೆಯ ಶಾಸಕ, ಸಂಸದರು ವಿಶ್ವ ವಿದ್ಯಾಲಯವನ್ನು ಸಂಪೂರ್ಣ ರ್ನಿಲಸಿದ್ದಾರೆ. ಸ್ಥಳಾಂತರ, ಸಿಬ್ಬಂದಿ ನೇಮಕ, ಅನುದಾನ ತರುವುದು ಸೇರಿ ಇತರ ವಿಷಯಗಳಲ್ಲಿ ಮೌನವಹಿಸಿದ್ದಾರೆ. ವಿವಿ ತಮಗೆ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಸದನದಲ್ಲೂ ಈ ಬಗ್ಗೆ ಪ್ರಶ್ನೆ ಎತ್ತಿದ್ದು ತೀರಾ ಕಡಿಮೆ. ಸದ್ಯ ಬಂದ ಅನುದಾನ ಬಳಕೆಗೂ ಗ್ರಹಣ ಹಿಡಿದಿದ್ದು, ವಾಪಸ್ ಹೋಗುವಂತಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ಜವಾಬ್ದಾರಿ ಮೆರೆಯಬೇಕಿದೆ.
ಸಂಶೋಧನಾ ಕಾರ್ಯಕ್ಕೆ 2024ರಲ್ಲೇ ಕೆಕೆಆರ್ಡಿಬಿಯಿಂದ ನಮ್ಮ ವಿವಿಗೆ 7.90 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಸಂಶೋಧನಾ ಕಾರ್ಯಕ್ಕೆ ಬಳಕೆ ಮಾಡಬೇಕು. ಹಿಂದಿನ ವಿಸಿ ಯಾಕೆ ಅನುದಾನ ಬಳಕೆ ಮಾಡಿಲ್ಲವೆಂಬ ಮಾಹಿತಿ ಇಲ್ಲ. ಈಗಲೂ ಅನುದಾನ ನಮ್ಮ ಬಳಿ ಇದೆ. ಅದನ್ನು ಕಲಬುರಗಿ ವಿಟಿಯುಗೆ ವಗಾಯಿಸುವಂತೆ ಪತ್ರ ಬಂದಿದೆ. ನಾವು ವರ್ಗಾಯಿಸಿಲ್ಲ. ನಾವೇ ಅನುದಾನ ಬಳಕೆ ಮಾಡಿಕೊಳ್ಳುವುದಾಗಿ ಪತ್ರ ಬರೆದು ಮನವರಿಕೆ ಮಾಡುತ್ತೇವೆ.
— ಎಸ್.ವಿ.ಡಾಣಿ. ಕೊಪ್ಪಳ ವಿವಿ ಕುಲಪತಿ.