ಕೊಪ್ಪಳ ನೂತನ ರೈಲು ನಿಲ್ದಾಣದ ನೋಟ.
- ಇಂದು ಪ್ರಧಾನಿಯಿಂದ ಲೋಕಾರ್ಪಣೆ
ಕೊಪ್ಪಳ : ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದ್ದ ನಗರದ ರೈಲ್ವೆ ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮರು ನಿರ್ಮಾಣ ಮಾಡಲಾಗಿದೆ. ಅತ್ಯಾಧುನಿಕ ಸೌಲಭ್ಯ ಕಲ್ಪಿಸಿದ್ದು ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವೇದಿಕೆ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ.
ದೇಶಾದ್ಯಂತ ಒಂದೇ ಮಾದರಿ ನಿಲ್ದಾಣ ಕಲ್ಪಿಸಲಾಗುತ್ತಿದ್ದು ಕೊಪ್ಪಳ ನಿಲ್ದಾಣಕ್ಕೆ 21.14 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜಿ+1 ಕಟ್ಟಡ ನಿರ್ಮಿಸಿದ್ದು, ಟಿಕೆಟ್ ಬುಕ್ಕಿಂಗ್ ಕಚೇರಿ, ನಿರೀಕ್ಷಣಾ ಕೊಠಡಿಗಳು, 600 ಚದರ ಮೀಟರ್ ಸುತ್ತಾಟ ಪ್ರದೇಶ, ವಾಹನ ಸಂಚಾರ, ಪ್ರತ್ಯೇಕ ಪಾರ್ಕಿಂಗ್, ಆರು ಸಾವಿರ ಚದರ ಮೀಟರ್ ಉದ್ದದ ಫ್ಲಾಟ್ ಫಾಮ್ರ್ಗೆ ಶೆಲ್ಟರ್ ನಿರ್ಮಾಣ ಮಾಡಲಾಗಿದೆ. ಮಳೆ, ಬಿಸಿಲಿನಿಂದ ಪ್ರಯಾಣಿಕರು ರಸಿಕೊಳ್ಳಲು ಅನುಕೂಲವಾಗಿದೆ.
ಹಿರಿಯ ನಾಗರಿಕರು, ಅಂಗವಿಕಲರ ಅನುಕೂಲಕ್ಕಾಗಿ ಎರಡು ಎಸ್ಕಲೇಟರ್, ಎರಡು ಲಿಫ್ಟ್ ಕಲ್ಪಿಸಲಾಗಿದೆ. ಮಾಹಿತಿ ಲಕ, ಎಲ್ಇಡಿ ಸ್ಕ್ರೀನ್, ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, ರೈಲು ಆಗಮನ, ನಿರ್ಗಮನ ಮಾಹಿತಿ ನೀಡುವಿಕೆ ಸುಲಭಗೊಳಿಸಿದೆ. ಮುಂಭಾಗವನ್ನು ಆಕರ್ಷಕವಾಗಿ ಡಿಸೈನ್ ಮಾಡಿದ್ದು, ವಿದ್ಯುತ್ ದೀಪ, ಸಿಸಿಟಿವಿ ಕ್ಯಾಮರಾ, ವಿಶಾಲ ಪಾರ್ಕಿಂಗ್, ಆಧುನಿಕ ಶೈಲಿಯ ವಿನ್ಯಾಸಗೊಳಿಸಲಾಗಿದೆ. ಶಿಶುವಿಹಾರ ಕೇಂದ್ರ, ಎಸಿ ಇರುವ ನಿರೀಕ್ಷಣಾ ಕೊಠಡಿಗಳು, ಸ್ವಯಂ ಚಾಲಿತ ಟಿಕೆಟ್ ನೀಡುವ ಯಂತ್ರ, ಶೌಚಗೃಹ, ಕುಡಿವ ನೀರು ವ್ಯವಸ್ಥೆ ಒದಗಿಸಲಾಗಿದೆ.