Koppal district SSLC result.
- 25ನೇ ಸ್ಥಾನಕ್ಕೆ ಜಿಗಿದ ಕೊಪ್ಪಳ
- ಫಲಿಸಿದ ಇಲಾಖೆ ಶ್ರಮ
ಕೊಪ್ಪಳ: ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು ಜಿಲ್ಲೆಯ ಶೇ.93.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ರಾಜ್ಯಮಟ್ಟದಲ್ಲಿ ಕೊಪ್ಪಳ 25ನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಕಳೆದ ವರ್ಷಕ್ಕಿಂತ ಶೇ.14.17ರಷ್ಟು ಹೆಚ್ಚುವರಿ ರಿಸಲ್ಟ್ ಬಂದಿರುವುದು ಸಮಾಧಾನಕರ ಸಂಗತಿ. ಲಿತಾಂಶ ಸುಧಾರಣೆಗೆ ಮಿಷಿನ್ 40 ಸೇರಿ ಇನ್ನಿತರ ತಂತ್ರಗಳು ನೆರವಾಗಿದ್ದು ಕೊಂಚ ನಿರಾಳತೆ ಮೂಡಿಸಿದೆ.
ಕಳೆದ ಬಾರಿ ಫಲಿತಾಂಶ ತೀವ್ರ ಕುಸಿತ ಕಂಡಿತ್ತು. ಮೊದಲ ವಾರ್ಷಿಕ ಪರೀಕ್ಷೆಯಲ್ಲಿ ಕೇವಲ ಶೇ.57.32ರಷ್ಟು ಮಕ್ಕಳು ಪಾಸ್ ಆಗಿದ್ದರು. ರಾಜ್ಯಮಟ್ಟದಲ್ಲಿ 30ನೇ ಸ್ಥಾನಕ್ಕೆ ಇಳಿಯುವಂತಾಗಿತ್ತು. ಮೂರು ಪರೀಕ್ಷೆಗಳು ಸೇರಿ ಅಂತಿಮವಾಗಿ ಶೇ.78.93ರಷ್ಟು ಮಕ್ಕಳು ಪಾಸ್ ಆಗಿದ್ದರಿಂದ ತಕ್ಕಮಟ್ಟಿಗೆ ಸುಧಾರಣೆಗೆ ದಾರಿ ಕಲ್ಪಿಸಲಾಗಿತ್ತು. ಈ ವರ್ಷ ನಿರೀೆಯಂತೆ ಫಲಿತಾಂಶ ಬಂದಿದೆ. ಆದರೆ, ರಾಜ್ಯದ ಒಟ್ಟಾರೆ ಫಲಿತಾಂಶವೂ ಗಣನೀಯ ಏರಿಕೆಯಾಗಿರುವುದು ರಾಜ್ಯಮಟ್ಟದ ಸ್ಥಾನ ಗಳಿಕೆಯಲ್ಲಿ ಕೊಂಚ ಹಿನ್ನೆಡೆಯಾಗಿದೆ ಎನ್ನಬಹುದು.
ಜಿಲ್ಲೆಯಲ್ಲಿ 193 ಸರ್ಕಾರಿ, 32 ಅನುದಾನಿತ ಹಾಗೂ 103 ಖಾಸಗಿ, ಸಮಾಜ ಕಲ್ಯಾಣ ಇಲಾಖೆಯ 12 ಹಾಗೂ ಇನ್ನಿತರ ಇಲಾಖೆಗಳ 32 ಪ್ರೌಢ ಶಾಲೆಗಳಿವೆ. 21,270 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 19,802 ಮಕ್ಕಳು ಉತ್ತೀರ್ಣರಾಗಿದ್ದಾರೆ. ತಾಲೂಕುವಾರು ಫಲಿತಾಂಶದಲ್ಲಿ ಯಲಬುರ್ಗಾ ತಾಲೂಕಿನಲ್ಲಿ ಶೇ.95.14ರಷ್ಟು ಮಕ್ಕಳು ತೇರ್ಗಡೆಯಾಗಿದ್ದು ಮೊದಲ ಸ್ಥಾನ ಪಡೆದಿದೆ. ಉಳಿದಂತೆ ಕ್ರಮವಾಗಿ ಗಂಗಾವತಿ ತಾಲೂಕು ಶೇ.92.88, ಕುಷ್ಟಗಿ 92.45 ಹಾಗೂ ಜಿಲ್ಲಾ ಕೇಂದ್ರ ಕೊಪ್ಪಳ ತಾಲೂಕು ಶೇ.89.53ರಷ್ಟು ಅಭ್ಯರ್ಥಿಗಳು ಪಾಸ್ ಆಗಿದ್ದು ಕೊನೇ ಸ್ಥಾನ ಪಡೆದಿದೆ.