ಒತ್ತುವರಿ ಆಗಿರುವ ಕೊಪ್ಪಳದ ಹುಲಿಕೆರೆ. 
ಕೊಪ್ಪಳ

ಕೊಪ್ಪಳ ಜಿಲ್ಲೆಯ ಕೆರೆಗಳೆಷ್ಟು ಸುರತ ?

ಪ್ರಮುಖ ಮುಖ್ಯಾಂಶಗಳು

  • 13 ಅತಿಕ್ರಮಣ ತೆರವು ಬಾಕಿ
  • ಹುಲಿಕೆರೆ ಸರ್ವೇ ಪೂರ್ಣ ?
ಕೊಪ್ಪಳ : ನಗರದ ಹುಲಿಕೆರೆ ಒತ್ತುವರಿ ವಿಷಯ ಮುನ್ನೆಲೆಗೆ ಬರುತ್ತಲೇ ಜಿಲ್ಲೆಯ ಇತರ ಕೆರೆಗಳ ಸ್ಥಿತಿ ಏನೆಂಬ ಪ್ರಶ್ನೆ ಎದ್ದಿದೆ. ಕಂದಾಯ ಅಧಿಕಾರಿಗಳ ಮಾಹಿತಿಯಂತೆ ಜಿಲ್ಲೆಯಲ್ಲಿ 206 ಕೆರೆಗಳಿವೆ. 13ರ ಒತ್ತುವರಿ ತೆರವು ಬಾಕಿ ಇದ್ದು, 138 ಎಕರೆಯಷ್ಟು ಭೂಮಿ ಸರ್ಕಾರದ ವಶವಾಗಬೇಕಿದೆ.
ಕೆರೆಗಳು ಅಂತರ್ಜಲ ಮಟ್ಟ ಕಾಯ್ದುಕೊಳ್ಳುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿವೆ. ಇದೇ ಉದ್ದೇಶದಿಂದ ಕಾಲ ಕಾಲಕ್ಕೆ ಸರ್ಕಾರ ಭೂಸ್ವಾಧಿನಪಡಿಸಿಕೊಂಡು ಕೆರೆ ನಿರ್ಮಿಸಿದೆ. ಆದರೆ, ಹದ್ದುಬಸ್ತು ಮಾಡಿಕೊಳ್ಳದೇ ಹಾಗೇ ಬಿಟ್ಟಿದ್ದರಿಂದ ಬಹುತೇಕ ಕೆರೆಗಳು ಕಣ್ಮರೆಯಾಗಿವೆ. ಹೈಕೋರ್ಟ್​ ಚಾಟಿ ಬೀಸಿದ ಮೇಲೆ ಸರ್ಕಾರ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಒತ್ತುವರಿ ತೆರವಿಗೆ ಮುಂದಾಗಿದೆ. ಕಂದಾಯ, ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ, ನಗರ&ಸ್ಥಳಿಯ ಸಂಸ್ಥೆ ಅಧೀನದಲ್ಲಿ ಕೆರೆಗಳು ಹಂಚಿಕೆಯಾಗಿವೆ. ಕೆಲವೆಡೆ ಜಮೀನು ನೀಡಿದರೂ ನಿರ್ವಹಣೆ ಆಗದೆ, ಉಳುಮೆ ಮುಂದುವರೆಸಿ ಮಾರಾಟ ಮಾಡಿದ ಉದಾಹರಣೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕುಷ್ಟಗಿ ತಾಲೂಕಿನಲ್ಲಿ ಟನೆ ನಡೆದಿದ್ದು, ಲೋಕಾಯುಕ್ತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.
ಇದೀಗ ಜಿಲ್ಲಾ ಕೇಂದ್ರ ಕೊಪ್ಪಳದ ಐತಿಹಾಸಿಕ ಹುಲಿಕೆರೆ ಒತ್ತುವರಿ ಆಗಿರುವ ಆರೋಪ ವ್ಯಕ್ತವಾಗಿದೆ. ಜವಾಬ್ದಾರಿ ಹೊತ್ತ ಇಲಾಖೆ ಕಾಪಿಟ್ಟುಕೊಳ್ಳದ ಕಾರಣ ಸುತ್ತಲೂ ಒತ್ತುವರಿಯಾಗಿದೆ. ವಿವಿಧ ಧಾರ್ಮಿಕ ಕಟ್ಟಡಗಳು ತಲೆ ಎತ್ತಿವೆ. ತಾವು ಚಿಕ್ಕವರಿದ್ದಾಗ ಇಲ್ಲಿ ಈ ಕಟ್ಟಡಗಳು ಇರಲಿಲ್ಲ ಎಂದು ಜನ ಹೇಳುತ್ತಿದ್ದಾರೆ. ಇತ್ತೀಚೆಗೆ ಕೆರೆ ಕೋಡಿ ಒಡೆದು ಒಳ ಭಾಗದಲ್ಲೇ ರಸ್ತೆ ನಿರ್ಮಿಸಿದ್ದು ಆಳುವಪಕ್ಷ&ವಿಪಕ್ಷದವರ ಆರೋಪ&ಪ್ರತ್ಯಾರೋಪಕ್ಕೆ ವೇದಿಕೆ ಕಲ್ಪಿಸಿತು. ನಗರಾಡಳಿತ, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸರ್ವೇ ಮಾಡಿದೆ. ಅತಿಕ್ರಮವಾಗಿದ್ದಲ್ಲಿ ತೆರವು ಮಾಡುವುದಾಗಿ ಭರವಸೆ ನೀಡಿದೆ. ಈಗಾಗಲೇ ಸಮೀೆ ಪೂರ್ಣಗೊಂಡಿದ್ದು ಎಲ್ಲೆಲ್ಲಿ ಅತಿಕ್ರಮಣವಾಗಿದೆ ಎಂಬುದು ಬಯಲಾಗಬೇಕಿದೆ.

206 ನೀರಿನ ಮೂಲ

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೆರೆಗಳಿದ್ದು ಜನ&ಜಾನುವಾರುಗಳಿಗೆ ಕುಡಿವ ನೀರು, ಅಂತರ್ಜಲಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗಿವೆ. ಕುಕನೂರು ತಾಲೂಕಿನಲ್ಲಿ 24, ಯಲಬುರ್ಗಾ 24, ಕೊಪ್ಪಳ 61, ಕನಕಗಿರಿ 23, ಕುಷ್ಟಗಿ 49, ಕಾರಟಗಿ 5, ಗಂಗಾವತಿ ತಾಲೂಕಿನಲ್ಲಿ 20 ಒಳಗೊಂಡು 206 ಕೆರೆಗಳಿವೆ. 8,389 ಎಕರೆ ವಿಸ್ತೀರ್ಣ ಹೊಂದಿವೆ. ಈ ಪೈಕಿ ಕುಕನೂರು ತಾಲೂಕಿನಲ್ಲಿ 3, ಯಲಬುರ್ಗಾ 4, ಕೊಪ್ಪಳ 5, ಕಾರಟಗಿ 1 ಹಾಗೂ ಗಂಗಾವತಿ ತಾಲೂಕಿನ 2 ಕೆರೆಗಳಲ್ಲಿ 167 ಎಕರೆಯಷ್ಟು ಪ್ರದೇಶ ಅತಿಕ್ರಮಣಗೊಂಡಿದೆ ಎಂದು ಗುರುತಿಸಲಾಗಿದೆ. ಇದರಲ್ಲಿ ಯಲಬುರ್ಗಾ ಮತ್ತು ಕಾರಟಗಿಯಲ್ಲಿ ತಲಾ ಒಂದು ಕೆರೆ ಒತ್ತುವರಿ ತೆರವುಗೊಳಿಸಿ 28.05 ಎಕರೆ ಜಮೀನು ಮರುವಶಕ್ಕೆ ಪಡೆಯಲಾಗಿದೆ.

138.95 ಎಕರೆ ವಶ ಬಾಕಿ

ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಸಭೆ ನಡೆಸಿ ಅತಿಕ್ರಮ ತೆರವು ಕಾರ್ಯಾಚರಣೆ ನಿರಂತರವಾಗಿ ಮಾಡುತ್ತಿದೆ. ಈಗಾಗಲೇ ಬಹುಪಾಲು ಒತ್ತುವರಿ ತೆರವುಗೊಂಡಿದೆ. ಕುಕನೂರು ತಾಲೂಕಿನಲ್ಲಿ 3, ತಲಬುರ್ಗಾ 3, ಕೊಪ್ಪಳ 5, ಕಾರಟಗಿ ತಾಲೂಕಿನಲ್ಲಿ 2 ಕೆರೆಗಳಲ್ಲಿ 138.95 ಎಕರೆ ಪ್ರದೇಶ ಮರು ವಶಕ್ಕೆ ಪಡೆಯುವುದು ಬಾಕಿ ಇದೆ. ಇದರಲ್ಲಿ ಕೆಲವೆಡೆ ಸರ್ಕಾರಿ ಕಚೇರಿ ಕಟ್ಟಡಗಳು, ಅಂಗನವಾಡಿ, ಶಾಲೆ, ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ ಇದೆ. ಹೀಗಾಗಿ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಮುಂದುವರೆಯಲು ಅಧಿಕಾರಿಗಳು ಯೋಜಿಸಿದ್ದಾರೆನ್ನಲಾಗಿದೆ. ಈ ನಡುವೆ ಹುಲಿಕೆರೆ ಒತ್ತುವರಿ ವಿಷಯ ಮುನ್ನೆಲೆಗೆ ಬಂದಿದ್ದು ಜಿಲ್ಲಾಡಳಿತ ಕೆರೆಗಳ ಸಂರಕ್ಷಣೆಗೆ ಯಾವ ನಡೆ ಅನುಸರಿಸಲಿದ ಎಂದು ಕಾದು ನೋಡಬೇಕಿದೆ.
"

ಹುಲಿಕೆರೆ ಒತ್ತುವರಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ವೇ ಮಾಡಿಸಲಾಗಿದೆ. ಬಹುತೇಕ ಪೂರ್ಣಗೊಂಡಿದೆ. ಅದರ ವಿವರ ಪಡೆದುಕೊಳ್ಳುವೆ. ಜಿಲ್ಲೆಯಲ್ಲಿನ ಕೆರೆಗಳ ಒತ್ತುವರಿ ತೆರವು ಮಾಡಲಾಗುತ್ತಿದೆ. ಇನ್ನಷ್ಟು ಬಾಕಿ ಇವೆ. ಅವುಗಳ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು.