ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು. ಎಎಸ್ಪಿ ಹೇಮಂತ್ ಕುಮಾರ್, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಯೋಜನಾಧಿಕಾರಿ ಡಿ.ಮಂಜುನಾಥ, ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರು, ಜಂಟಿ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ ಇದ್ದರು.
- ಅಶಿಸ್ತು ಸಹಿಸಲು ಆಗದು
- ಅಧಿಕಾರಿಗಳಿಗೆ ಡಿಸಿ ಎಚ್ಚರಿಕೆ
ಕೊಪ್ಪಳ: ಎಲ್ಲ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಂಡು ಕೆಲಸ ಮಾಡಿ. ಅಶಿಸ್ತು ತೋರಿದರೆ ಶಿಸ್ತುಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆ ನಡೆಸಿ ಮಾತನಾಡಿದರು.
ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವಂತೆ ಹೇಳುವ ಪರಿಸ್ಥಿತಿ ಬರಕೂಡದು. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಮಯ ಪ್ರಜ್ಞೆ ಇಲ್ಲದಿದ್ದರೆ ಹೇಗೆ ? ನೀವು ತಡವಾಗಿ ಬಂದಲ್ಲಿ ಕಚೇರಿ ಸಿಬ್ಬಂದಿಗೆ ಇನ್ನೇನು ಬುದ್ಧಿ ಹೇಳಲು ಸಾಧ್ಯ ? ನಿಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ ಎಂದ ಡಿಸಿ ಎಲ್ಲ ಇಲಾಖೆ ಮುಖ್ಯಸ್ಥರಿಗೆ ಪ್ರತ್ಯೇಕವಾಗಿ ಯಾವಾಗ ಕಚೇರಿಗೆ ಬಂದಿದ್ದು, ಸಿಬ್ಬಂದಿ ಯಾವಾಗ ಬಂದರು ಎಂದು ವಿಚಾರಿಸಿ ಶಿಸ್ತಿನ ಪಾಠ ಮಾಡಿದರು.
ಬಿಸಿಲಿನ ಪ್ರಖರತೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕಚೇರಿ ಸಮಯ ಬೆಳಗ್ಗೆ 8ರಿಂದ ಮಧ್ಯಾಹ್ನ 1.30 ಗಂಟೆವರೆಗೆ ನಿಗದಿಪಡಿಸಲಾಗಿದೆ. ಆದರೂ, ಕೆಲ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುತ್ತಿಲ್ಲವೆಂದು ಮಾಧ್ಯಮಗಳು ವರದಿ ಮಾಡುತ್ತಿವೆ. ನಾನು ಇಂದು ಕೆಲ ಇಲಾಖೆಗಳಿಗೆ ತೆರಳಿ ನೋಡಿರುವೆ. ಬೆಳಗ್ಗೆ 10 ಗಂಟೆ ಆದರೂ ಕೆಲವರು ಬಂದಿಲ್ಲ. ಸಿಬ್ಬಂದಿಯೂ ಇರಲಿಲ್ಲ. ಇದು ನಾಚಿಕಗೇಡಿನ ಸಂಗತಿ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಎಎಸ್ಪಿ ಹೇಮಂತ್ ಕುಮಾರ್, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಯೋಜನಾಧಿಕಾರಿ ಡಿ.ಮಂಜುನಾಥ, ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರು, ಜಂಟಿ ಕೃಷಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಡಿಎಚ್ಒ ಡಾ.ಟಿ.ಕೃಷ್ಣಮೂರ್ತಿ, ಡಿಡಿಪಿಯು ಜಗದೀಶ ಜಿ.ಎಚ್. ಇತರರಿದ್ದರು.