ಕೊಪ್ಪಳ ಕೇಂದ್ರ ಬಸ್ ನಿಲ್ದಾಣದಲ್ಲಿ ಜನಬಳಕೆಗೆ ಮುಕ್ತವಾದ ನಗರಸಭೆಯಿಂದ ನಿಮಾರ್ಣಗೊಂಡ ಶೌಚಗೃಹಗಳು.
ಕೊಪ್ಪಳ : ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನಗರಸಭೆಯಿಂದ ಸುಮಾರು 11 ಲಕ್ಷ ರೂ. ವೆಚ್ಚದಲ್ಲಿ ನಿಮಾರ್ಣಗೊಂಡಿದ್ದ ಸಾರ್ವಜನಿಕ ಶೌಚಗೃಹಗಳನ್ನು ಕೊನೆಗೂ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ.
ಶೌಚಗೃಹಗಳು ನಿಮಾರ್ಣವಾಗಿ ಎರಡು ವರ್ಷಗಳಿಂದ ಬೀಗ ಹಾಕಿ ರ್ನಿಲಕ್ಷ್ಯಕ್ಕೊಳಗಾಗಿತ್ತು. ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ಮಾರ್ಚ್ 22ರಂದು ""ಬಸ್ ನಿಲ್ದಾಣದ ಶೌಚಗೃಹಕ್ಕೆ ಬೀಗ'' ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ವರದಿ ಪ್ರಕಟವಾದ ಬಳಿಕ ಎಚ್ಚೆತ್ತ ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕರು ಹಾಗೂ ಎಇಇಗಳು ಕ್ರಮ ಕೈಗೊಂಡು ಶೌಚಗೃಹಗಳನ್ನು ಸಾರ್ವಜನಿಕ ಬಳಕೆಗೆ ತೆರೆದಿದ್ದಾರೆ.
ನಗರಸಭೆಯಿಂದ ನಿಮಾರ್ಣಗೊಂಡಿದ್ದರೂ ಸಾರ್ವಜನಿಕರಿಗೆ ಉಪಯೋಗವಾಗದೆ ಧೂಳು ಹಿಡಿಯುತ್ತಿದ್ದ ಕಟ್ಟಡದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ಹಳ್ಳಿಗಾಡಿನ ಪ್ರಯಾಣಿಕರು ಶೌಚಸೌಲಭ್ಯ ಇಲ್ಲದೆ ಪರದಾಡುತ್ತಿದ್ದರು. ಈಗ ಶೌಚಗೃಹ ತೆರೆಯಲ್ಪಟ್ಟಿರುವುದರಿಂದ ಪ್ರಯಾಣಿಕರಲ್ಲಿ ನಿರಾಳತೆ ಮೂಡಿದೆ.
ಇದೇ ವೇಳೆ, ಬಸ್ ನಿಲ್ದಾಣದಲ್ಲಿನ ಇತರೆ ಮೂತ್ರಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆ ಮೇಲೂ ಅಧಿಕಾರಿಗಳು ಗಮನಹರಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ. ಜನರ ತೆರಿಗೆ ಹಣದಲ್ಲಿ ನಿಮಾರ್ಣವಾಗುವ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಜನಬಳಕೆಗೆ ಲಭ್ಯವಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.