ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು. ಪ್ರಮುಖರಾದ ಡಾ.ಬಸವರಾಜ ಕ್ಯಾವಟರ್, ನವೀನ್ ಗುಳಗಣ್ಣವರ, ಕರಿಯಪ್ಪ ಮೇಟಿ, ರತ್ನಾಕುಮಾರಿ, ಮಹಾಂತೇಶ ಮೈನಳ್ಳಿ ಇದ್ದರು.
- ವಿವಿಧೆಡೆ ಆಚರಣೆ
- ಭವ್ಯ ಮೆರವಣಿಗೆ
- ಗಣ್ಯರಿಂದ ಪುಷ್ಪನ ನಮನ ಸಲ್ಲಿಕೆ
ಕೊಪ್ಪಳ : ಅಂಬೇಡ್ಕರ್ ಜಯಂತಿ ಕೇವಲ ಆಚರಣೆಗೆ ಸೀಮಿತಗೊಳಿಸದೇ, ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಹಲವು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ವಿನಾ ಕಾರಣ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಅವಶ್ಯ. ಅದನ್ನು ಪ್ರಧಾನಿ ಮಾಡುತ್ತಿದ್ದಾರೆ. ಈ ಬಗ್ಗೆ ಟೀಕಿಸುವುದು ಸರಿಯಲ್ಲವೆಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್ ಮಾತನಾಡಿ, ಸಂವಿಧಾನ ಇಂದು ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ನಮ್ಮ ಸರ್ಕಾರ ಅಂಬೇಡ್ಕರ್ ಜೀವನ&ಸಾಧನೆ ಪರಿಚಯಿಸುವ ಉದ್ದೇಶದಿಂದ ಥೀಮ್ ಪಾರ್ಕ್ ನಿಮಾರ್ಣ ಮಾಡುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಮಾತನಾಡಿ, ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಅಂಬೇಡ್ಕರ್ ಕೊಡುಗೆ ಎಂದು ನೆನೆದರು.
ಪದಾಧಿಕಾರಿಗಳಾದ ಕರಿಯಪ್ಪ ಮೇಟಿ, ರತ್ನಾಕುಮಾರಿ, ಮಹಾಂತೇಶ ಮೈನಳ್ಳಿ, ಗಣೇಶ ಹೊರತಟ್ನಾಳ, ರಮೇಶ್ ನಾಡಿಗೇರ್, ಸುನಿಲ್ ಹೆಸರೂರು, ಶಿವಕುಮಾರ ಅರಿಕೇರಿ, ನಾಗರಾಜ ಮುರಳಿ, ವಿರೇಶ ಸಜ್ಜನ್ ಇತರರಿದ್ದರು.
ಜೆಡಿಎಸ್ ಕಚೇರಿ : ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ದುರ್ಬಲರ, ಅಸಹಾಯಕರ ಹಾಗೂ ತುಳಿತಕ್ಕೊಳಗಾದವರ ಬದುಕಿಗೆ ಬೆಳಕಾಗಿ ಸಹ ಬಾಳ್ವೆಯ ಭಾರತೀಯ ತತ್ವವನ್ನು ಎತ್ತಿ ಹಿಡಿದವರು ಅಂಬೇಡ್ಕರ್. ಅವರು ಬುದ್ದನ ಪ್ರೇರಣೆ, ಬಸವಣ್ಣನ ಸಮಾನತೆ ಎರಡನ್ನೂ ಒಳಗೊಂಡಿದ್ದರು ಎಂದು ಅಭಿಪ್ರಾಯಪಟ್ಟರು.
ಪಕ್ಷದ ಪದಾಧಿಕಾರಿಗಳಾದ ಕರಿಯಪ್ಪ ಹಾಲವರ್ತಿ, ಸುರೇಶ್ ದದೆಗಲ್, ಸೋಮನಗೌಡ ಹೊಗರನಾಳ, ನಿರ್ಮಲ ಮೇದಾರ, ರತ್ನಮ್ಮ ಹಿರೇಮಠ, ಮಾರುತಿಗೌಡ ಪೊಲೀಸ್ ಪಾಟೀಲ್, ಶಿವಕುಮಾರ್ ಏಣಿಗಿ, ರತ್ನಮ್ಮ ಹಿರೇಮಠ, ಶಿವರಾಜ್ ಮಠಪತಿ ಇತರರಿದ್ದರು.
ಜ್ಞಾನಬಂಧು ಶಾಲೆ : ತಾಲೂಕಿನ ಭಾಗ್ಯನಗರ ಪಟ್ಟಣದ ಜ್ಞಾನ ಬಂಧು ಸಂಸ್ಥೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಉಪ ಪ್ರಾಚಾರ್ಯ ಮಂಜುನಾಥ ಚಿತ್ರಗಾರ ಸಂವಿಧಾನ ಮಹತ್ವ ತಿಳಿಸಿದರು. ಉಪನ್ಯಾಸಕ ರೇಣುಕಾರಾಜ, ಜೆ.ರವೀಂದ್ರ, ಮುಖ್ಯ ಶಿಕ್ಷಕಿ ಜ್ಯೋತಿ ಎಸ್.ಎಸ್., ಶಿಕ್ಷಕಿ ಸವಿತಾ, ಸಾವಿತ್ರಮ್ಮ, ಹೇಮಾ ಇತರರಿದ್ದರು.
ಕೊಪ್ಪಳ ವಿವಿ : ಕುಕನೂರು ತಾಲೂಕಿನ ತಳಕಲ್ನ ಕೊಪ್ಪಳ ವಿವಿಯಲ್ಲಿ ಮಂಗಳವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಕುಲಪತಿ ಪ್ರೊ.ಎಸ್.ವಿ. ಡಾಣಿ ಮಾತನಾಡಿ, ಸಮಾನತೆ, ಶಿಕ್ಷಣ, ಮಹಿಳಾ ಹಕ್ಕುಗಳು ಹಾಗೂ ಕಾರ್ಮಿಕರ ಕಲ್ಯಾಣ ಅಂಬೆಡ್ಕರ್ ಕನಸುಗಳಾಗಿದ್ದವು. ಪ್ರತಿಯೊಬ್ಬರೂ ಇವುಗಳ ಮಹತ್ವ ಅರಿತು ನಡೆಯಬೇಕು ಎಂದರು.ಕುಲಸಚಿವ ಪ್ರೊ.ಕೆ.ರಮೇಶ, ಕನ್ನಡ ವಿಭಾಗದ ಪ್ರಾಧ್ಯಾಪಕ ವಿರೇಶ ಉತ್ತಂಗಿ, ಪಾರ್ವತಿ ಕನಕಗಿರಿ, ಪ್ರವಿಣ ಪಾಟೀಲ್, ಅನಂತ ಕುಮಾರ ದೊರೆ, ಮೌಲಾಸಾಬ್, ಮಂಜುನಾಥ ಪೂಜಾರ, ಸೃಷ್ಟಿ ಕಾವಳ್ಕರ್, ಅಲ್ತಾಫ್ ಹುಸೇನ್, ನಾಗರಾಜ ಇತರರಿದ್ದರು.
ಸಂವಿಧಾನ ಪ್ರಸ್ತಾವನೆ ಅನಾವರಣ : ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಿಸಿದ ಸಂವಿಧಾನ ಪ್ರಸ್ತಾವನೆ ಪ್ರತಿರೂಪವನ್ನು ಸಂಸದ ರಾಜಶೇಖರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ ಅನಾವರಣಗೊಳಿಸಿದರು. ಬಳಿಕ ಉದ್ಯಾನದಲ್ಲಿನ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಜಿಪಂ ಸಿಇಒ ವರ್ಣಿತ್ ನೇಗಿ , ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಡಿಎಸ್ ಟಿ.ಕೃಷ್ಣಮೂರ್ತಿ ಇತರರಿದ್ದರು.