- 15ಕ್ಕೂ ಹೆಚ್ಚು ಜಿಲ್ಲೆಗಳಿಗೆ ಒಂದೇ ಕೇಂದ್ರ
- ಕಣ್ಮುಚ್ಚಿ ಕುಳಿತ ಒಕ್ಕೂಟಗಳು
- ಶಿಕಾರಿಪುರಕ್ಕೆ 20 ಸಾವಿರ ಟನ್ ಗುರಿ
ಕೊಪ್ಪಳ: ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಮುಂದಾಗಿರುವ ರಾಜ್ಯ ಹಾಲು ಮಹಾಮಂಡಳಿ ಅವೈಜ್ಞಾನಿಕವಾಗಿ ಕೇಂದ್ರ ಆರಂಭಿಸಿ ರೈತರಿಗೆ ಅನ್ಯಾಯ ಎಸಗುತ್ತಿದೆ. ಸರ್ಕಾರ ನೀಡಿದ ಗುರಿಗಿಂತ ಅರ್ಧದಷ್ಟು ಕಡಿಮೆ ಖರೀದಿಗೆ ಮುಂದಾಗಿರುವುದು ಬೆಂಬಲ ಬೆಲೆ ಯೋಜನೆ ಖರೀದಿ ಎಂಬುದನ್ನೇ ಅಣಕಿಸುವಂತಿದೆ.
ರಾಜ್ಯ ಸರ್ಕಾರ ಮಂಡಳಿ ತಯಾರಿಸುವ ಪಶು ಆಹಾರಕ್ಕೆ ಅಗತ್ಯ ಇರುವ ಒಂದು ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ನೇರವಾಗಿ ರೈತರಿಂದ ಖರೀದಿಸಲು ಸೂಚಿಸಿದೆ. ಪ್ರತಿ ಕ್ವಿಂಟಾಲ್ಗೆ 2400ರೂ. ದರ ನಿಗದಿಪಡಿಸಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ಅನ್ನದಾತರಿಗೆ ವರವಾಗಲಿದೆ ಎಂದು ಆಶಿಸಿದೆ. ರಾಜ್ಯಾದ್ಯಂತ ಕೇಂದ್ರ ತೆರೆದು ಖರೀದಿ ಮಾಡಬೇಕಿದ್ದ ಕೆಎಂಎಫ್ ಕಾಟಾಚಾರಕ್ಕೆ ಐದು ಕಡೆ ಕೇಂದ್ರ ಆರಂಭಿಸಿದೆ. ಆಹಾರ ಉತ್ಪಾದನಾ ಘಟಕಗಳಿಗೆ ಖರೀದಿಗೆ ಜವಾಬ್ದಾರಿ ನೀಡಿರುವುದ ಅನ್ನದಾತರ ಬೇಸರಕ್ಕೆ ಕಾರಣವಾಗಿದೆ.
ರಾಜನಕುಂಟೆ, ಶಿಕಾರಿಪುರ, ಧಾರವಾಡ, ಹಾಸನ, ಗುಬ್ಬಿಯಲ್ಲಿ ಕೆಎಂಎಫ್ ಪಶು ಆಹಾರ ಉತ್ಪಾದನಾ ಘಟಕಗಳಿವೆ. ರಾಜನಕುಂಟೆ ಘಟಕಕ್ಕೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಂದ 3 ಸಾವಿರ ಟನ್ ಮೆಕ್ಕೆಜೋಳ ಖರೀದಿಗೆ ಸೂಚಿಸಿದೆ. ಇನ್ನು ಗುಬ್ಬಿ ಘಟಕಕ್ಕೆ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಂದ 10 ಸಾವಿರ ಟನ್, ಹಾಸನ ಘಟಕಕ್ಕೆ ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ 10 ಸಾವಿರ ಟನ್ ಖರೀದಿಗೆ ಗುರಿ ನಿಗದಿಪಡಿಸಿದೆ.
ಶಿಕಾರಿಪುರ ಘಟಕಕ್ಕೆ 20 ಸಾವಿರ ಟನ್ ಗುರಿ ನೀಡಿದ್ದು, ಶಿವಮೊಗ್ಗ, ಹಾವೇರಿ, ದಣ ಕನ್ನಡ, ದಾವಣಗೆರೆ ಜಿಲ್ಲೆಗಳಿಂದ ಖರೀದಿಸಲು ತಿಳಿಸಿದೆ. ಆದರೆ, ಧಾರವಾಡ ಘಟಕಕ್ಕೆ 7 ಸಾವಿರ ಟನ್ ಗುರಿ ನೀಡಿದೆ. ಧಾರವಾಡ, ಹಾವೇರಿ, ಗದಗ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಂದ ಖರೀದಿಸಲು ಆದೇಶಿಸಿದೆ.
ಅವೈಜ್ಞಾನಿಕ ನಡೆ
ಯಾವ ಜಿಲ್ಲೆಗಳಲ್ಲಿ ಎಷ್ಟುಇ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ ಎಂಬುದನ್ನು ಅರಿಯದೇ ಅವೈಜ್ಞಾನಿಕವಾಗಿ ಜಿಲ್ಲೆಗಳನ್ನು ಹಂಚಿಕೆ ಮಾಡಿದೆ. ಶಿವಮೊಗ್ಗದ ಶಿಕಾರಿಪುರ ಘಟಕಕ್ಕೆ ಕೇವಲ ನಾಲ್ಕು ಜಿಲ್ಲೆಗಳಿಂದ 20 ಸಾವಿರ ಟನ್ ಖರೀದಿಗೆ ತಿಳಿಸಿದೆ. ಧಾರವಾಡ ಘಟಕಕ್ಕೆ 15 ಜಿಲ್ಲೆಗಳಿಂದ 7 ಸಾವಿರ ಟನ್ ಖರೀದಿಗೆ ಗುರಿ ನಿಗದಿಪಡಿಸಿರುವುದು ಹಾಸ್ಯಾಸ್ಪದವಾಗಿದೆ. ಹೆಚ್ಚು ಮೆಕ್ಕೆಜೋಳ ಬೆಳೆವ ಪ್ರದೇಶಗಳಿಗೆ ಕಡಿಮೆ ಖರೀದಿ ಗುರಿ ನೀಡಿದರೆ, ಬೆಳೆಯದ ಪ್ರದೇಶಗಳಿಗೆ ಹೆಚ್ಚು ಗುರಿ ನಿಗದಿಪಡಿಸಿದ್ದು ಕಾಟಾಚಾರಕ್ಕೆ ಖರೀದಿ ಪ್ರಕ್ರಿಯೆ ನಡೆಸುತ್ತಿದೆ ಎಂಬಂತಾಗಿದೆ. ಇನ್ನು ಕೆಎಂಎಫ್ ಕ್ರಮವನ್ನು ಪ್ರಶ್ನಿಸಬೇಕಾದ ಹಾಲು ಒಕ್ಕೂಟಗಳು ತಮಗೆ ಸಂಬಂಧ ಇಲ್ಲವೆನ್ನುವಂತೆ ವರ್ತಿಸುತ್ತಿರುವುದು ದುರಂತ.