ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಸದಸ್ಯರು ಗಂಗಾವತಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಶನಿವಾರ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಪದಾಧಿಕಾರಿಗಳಾದ ಹುಸೇನ್‌ಸಾಬ್, ಮುತ್ತಣ್ಣ ಈಳಿಗೇರ್, ಹುಲುಗಪ್ಪ ಜೋಗಿ ಇತರರಿದ್ದರು. 
ಕೊಪ್ಪಳ

ಕೇರಳ ಸರ್ಕಾರದ ಕ್ರಮಕ್ಕೆ ಕರವೇ ಖಂಡನೆ

ಶಾಮಸುಂದರ್ ಕೊಪ್ಪಳಕರ್
ಗಂಗಾವತಿ: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸಿರುವ ಅಲ್ಲಿನ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಶನಿವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ಸಂವಿಧಾನದಲ್ಲಿ ಆಯಾ ರಾಜ್ಯದಲ್ಲಿ ಭಾಷೆ ಉಳಿಸಲು ಕಾಯ್ದೆ ಮಾಡಬಹುದು. ಆದರೆ ಕನ್ನಡಿಗರ ಪ್ರಥಮ ಕನ್ನಡ ಭಾಷೆ ಆಯ್ಕೆ ವಿಚಾರದಲ್ಲಿ ಸ್ವತಂತ್ರವಾಗಿ ಬಿಡಬೇಕಿದ್ದು, ಅನಗತ್ಯ ಒತ್ತಡ ಹಾಕಬಾರದು.
ಕಾಸರಗೋಡಿನಲ್ಲಿ ಶೇ.90 ನಿವಾಸಿಗಳು ಕನ್ನಡ ಮಾತಾಡುತ್ತಿದ್ದರೂ ಕೇರಳಕ್ಕೆ ಸೇರಿದೆ. ಅಲ್ಲಿರುವ ಕನ್ನಡಿಗರ ಬಗ್ಗೆ ಯೋಚಿಸಿ ಸರ್ಕಾರ ಭಾಷ ಕಾಯ್ದೆ ರೂಪಿಸಬೇಕಿದ್ದು, ಕಾಯ್ದೆಯ 6ನೇ ಅಧಿಸೂಚಿಯಲ್ಲಿ ಭಾಷಿಕ ಅಲ್ಪಸಂಖ್ಯಾತರನ್ನು ಹೊರತುಪಡಿಸಬೇಕೆಂಬ ಉಲ್ಲೇಖವಿದ್ದು, ಅವರನ್ನು ಹೊರತುಪಡಿಸಿ ಕೇರಳ ಕಡ್ಡಾಯ ನಿಯಮ ಮಾಡಬೇಕಿದೆ. ಗಡಿ ಭಾಗದ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿದ್ದು, ಭಾಷಾ ನೀತಿ ಬಗ್ಗೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಬೇಕು. ಕೇರಳ ಸರ್ಕಾರ ತಪ್ಪು ಮಾಡಿದ್ದು, ಕಾಯ್ದೆಯಲ್ಲಿ ತಿದ್ದುಪಡಿ ತರುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಹುಸೇನ್‌ಸಾಬ್, ಮುತ್ತಣ್ಣ ಈಳಿಗೇರ್, ಹುಲುಗಪ್ಪ ಜೋಗಿ, ಬಸವರಾಜ ನಾಯಕ, ವೆಂಕಟೇಶ ಭೋವಿ, ನಾಗರಾಜ ನಾಯಕ, ವೆಂಕಟೇಶ, ಪುಂಡಲಿಕ ಇತರರಿದ್ದರು.