ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾಯಕ ಶರಣರ ಜಯಂತಿ ಮಂಗಳವಾರ ಆಚರಿಸಲಾಯಿತು. ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ, ಪ್ರಾಧ್ಯಾಪಕರಾದ ಎಂ.ಶಂಕ್ರಪ್ಪ, ಕೆ.ವಿರೂಪಾಕ್ಷ, ಡಾ.ಶಶಿಕುಮಾರ ಇತರರಿದ್ದರು. 
ಕೊಪ್ಪಳ

ಭಕ್ತಿಪೂರ್ವಕ ಕೆಲಸದಿಂದ ವತ್ತಿ ಶ್ರೇಷ್ಠತೆ ಸಾಧ್ಯ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ಕಾಯಕ ಶರಣರು ಸರಳ ಜೀವನ, ನೇರ ಸಂದೇಶ ಮತ್ತು ಅನುಭವಿಗಳಿಂದ ಮೌಲ್ಯಯುತ ವಚನಗಳನ್ನು ರಚಿಸಿದ್ದು, ಸಮಾಜವನ್ನು ಉನ್ನತೀಕರಿಸಿದ್ದಾರೆ ಎಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ, ಉರಿಲಿಂಗ ಪೆದ್ದಿ ವಚನಗಳು ಸಮ ಸಮಾಜ ನಿರ್ಮಾಣಕ್ಕೆ ಸ್ಫೂರ್ತಿಯಾಗಿದ್ದು, ನೇರನುಡಿಯ ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಕಾರಣರಾಗಿದ್ದಾರೆ. ಭಕ್ತಿಪೂರ್ವಕ ಕಾಯಕದಿಂದ ವತ್ತಿಶ್ರೇಷ್ಠತೆ ಸಾಧ್ಯವೆಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದರು.
ವಚನ ಸಾಹಿತ್ಯ ಕುರಿತು ಉಪನ್ಯಾಸಕ ವೀರೇಶ ಮಾತನಾಡಿದರು. ಪ್ರಾಧ್ಯಾಪಕರಾದ ಎಂ.ಶಂಕ್ರಪ್ಪ, ಕೆ.ವಿರೂಪಾಕ್ಷ, ರವಿಕುಮಾರ, ಡಾ.ಶಶಿಕುಮಾರ, ಉಪನ್ಯಾಸಕರಾದ ವೆಂಕಟರಾಜು, ಮಲ್ಲಯ್ಯ, ಚನ್ನಮಲ್ಲ, ಈಶಪ್ಪ, ಸಾಯಿಕುಮಾರ, ಪ್ರವೀಣಕುಮಾರ, ಜಬೀನಾಬೇಗಂ, ಶಾಂತಿ, ಚಿನ್ನವರಪ್ರಸಾದ ಶರಣಬಸವ ಇತರರಿದ್ದರು.
ತಹಸಿಲ್ ಕಚೇರಿ: ಇಲ್ಲಿ ಕಂದಾಯ ಇಲಾಖೆಯಿಂದ ಕಾಯಕ ಶರಣರ ಜಯಂತಿ ಆಚರಿಸಲಾಯಿತು. ಶರಣರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಸಲ್ಲಿಸಿದ ಉಪತಹಸೀಲ್ದಾರ್ ಕೃಷ್ಣವೇಣಿ ಮಾತನಾಡಿದರು. ಶಿರಸ್ತೇದಾರರಾದ ಶ್ರೀಕಂಠೇಶ, ನಾಗರತ್ನಮ್ಮ, ಮಹ್ಮದ್ ರಫಿ, ಸೂರ್ಯಕಾಂತ ನಾಯ್ಕ, ಕವಿತಾ, ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಇತರರಿದ್ದರು.