ಗಂಗಾವತಿ ಶ್ರೀ ಶಾರದಾಂಬೆ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕವಿತಾ ದಿಗ್ಗಾವಿ ಶನಿವಾರ ಚಾಲನೆ ನೀಡಿದರು. ಭಜನಾ ಮಂಡಳಿ ಸದಸ್ಯರಾದ ಶಕುಂತಲಾ, ಶ್ರೀದೇವಿ ಇತರರಿದ್ದರು.
- ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿಕೆ
- ಶ್ರೀ ಶಾರದಾಂಬೆ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ
ಗಂಗಾವತಿ: ಇಲ್ಲಿನ ಶಾರದಾ ನಗರದ ಶ್ರೀ ಶಾರದಾಂಬೆ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.
ದೇವಾಲಯದಲ್ಲಿನ ಶಾರದಾಂಬೆ ಸೇರಿ ಪರಿವಾರದ ಮೂರ್ತಿಗಳಿಗೆ ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ, ಲಲಿತ ಸಹಸ್ರನಾಮ ಪಾರಾಯಣ, ಶಾರದಾ ಭಜನಾ ಮಂಡಳಿಯಿಂದ ಭಜನೆ ಮತ್ತು ದೀಪೋತ್ಸವ ಜರುಗಿತು.
ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಮನದ ಅಂಧಕಾರ ತೆಗೆದು ಹಾಕುವಲ್ಲಿ ಕಾರ್ತಿಕ ದೀಪೋತ್ಸವ ಪೂರಕವಾಗಿದ್ದು, ಕತ್ತಲು ಎಂಬುವುದು ಅಜ್ಞಾನದ ಸಂಕೇತ. ಅಂತಹ ಅಜ್ಞಾನವನ್ನು ದೀಪ ಹಚ್ಚುವುದರ ಮೂಲಕ ತೊಲಗಿಸಬೇಕಿದೆ. ಪ್ರಸ್ತುತ ದಿನಗಳಲ್ಲಿ ಜೀವನದ ಮೌಲ್ಯ ಕುಸಿಯುತ್ತಿದ್ದು, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಜಾಗೃತಗೊಳಿಸಬೇಕಿದೆ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕವಿತಾ ದಿಗ್ಗಾವಿ, ವಿಪ್ರ ಸಮಾಜದ ಮುಖಂಡರಾದ ಭೀಮಭಟ್ ಬಸಾಪಟ್ಟಣ, ರಾಘವೇಂದ್ರ ಅಳವಂಡಿಕರ್, ಭೀಮಶಂಕರ್ ಹೊಸಳ್ಳಿ, ಶೇಷಗಿರಿ ಗಡಾದ್, ವೇಣುಗೋಪಾಲ್, ಶ್ರೀಧರ್, ನಾಗೇಶ, ಸುದರ್ಶನ ವೈದ್ಯ, ಶ್ರೀನಿವಾಸ ಕರಮುಡಿ ಹಾಗೂ ಮಹಿಳಾ ಭಜನಾ ಮಂಡಳಿ ಸದಸ್ಯರಿದ್ದರು.