- ಕನಕಗಿರಿ-ಆನೆಗೊಂದಿ ಉತ್ಸವ
- ಅನುದಾನವಿದ್ದರೂ ಉತ್ಸಾಹವಿಲ್ಲ
- ತಲಾ 3 ಕೋಟಿ ರೂ. ಬಿಡುಗಡೆ
ಜಿಲ್ಲೆಯ ಸಾಂಸತಿಕ, ಐತಿಹಾಸಿಕ ಪ್ರತಿಬಿಂಬವಾಗಿರುವ ಕನಕಗಿರಿ, ಆನೆಗೊಂದಿ ಉತ್ಸವ ಆಚರಣೆಗೆ ಸರ್ಕಾರ ಅಷ್ಟಾಗಿ ಉತ್ಸಾಹ ತೋರುತ್ತಿಲ್ಲ. ಎರಡೂ ಉತ್ಸವಕ್ಕೆ ತಲಾ ಮೂರು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ದಿನಾಂಕ ನಿಗದಿಗೆ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆಸಕ್ತಿ ತೋರಬೇಕಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ನಾಡಿನ ಎಲ್ಲ ಉತ್ಸವಗಳನ್ನು ನಡೆಸಿದೆ. ಸಾಂಪ್ರದಾಯಿಕವಾಗಿರುವ ಹಂಪಿ, ಕಿತ್ತೂರು, ಮೈಸೂರು ದರಸಾ ಇನ್ನಿತರ ಉತ್ಸವ ಹಾಗೂ ಸಾಂಸತಿಕ ಕಾರ್ಯಕ್ರಮಗಳು ಪ್ರತಿ ವರ್ಷ ನಿಗದಿತ ದಿನಾಂಕದಂದೇ ನಿರಾತಂಕವಾಗಿ ಸಾಗುತ್ತಿವೆ. ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಹೊಸದಾಗಿ ತಾಲೂಕುಗಳಲ್ಲಿ ಉತ್ಸವ ಆಚರಣೆಯಾಗುತ್ತಿವೆ. ಕನ್ನಡ ಮತ್ತು ಸಂಸತಿ ಸಚಿವ ಶಿವರಾಜ ತಂಗಡಗಿ ರಾಜ್ಯದ ಸಾಂಸತಿ ಚಟುವಟಿಕೆಗಳ ಆಯೋಜನೆಗೆ ಉತ್ಸುಕತೆ ತೋರುತ್ತಿದ್ದಾರೆ. ತಮ್ಮ ತವರು ಜಿಲ್ಲೆ, ಅದರಲ್ಲೂ ರಾಜಕೀಯ ಬೆಳವಣಿಗೆಗೆ ವೇದಿಕೆ ಕಲ್ಪಿಸಿದ ಕನಕಗಿರಿ ಉತ್ಸವ ಹಾಗೂ ವಿಜಯನಗರ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಆನೆಗೊಂದಿ ಉತ್ಸವಗಳಿಗೆ ಅಷ್ಟಾಗಿ ಉತ್ಸಾಹ ತೋರಿದಂತೆ ಕಾಣುತ್ತಿಲ್ಲ.
ಜಿಲ್ಲೆಯ ಇತರ ಜನಪ್ರತಿನಿಧಿಗಳಲ್ಲೂ ಅಷ್ಟಾಗಿ ಕಾಳಜಿ ಕಾಣುತ್ತಿಲ್ಲ. ಪ್ರತಿ ವರ್ಷವೂ ವಿವಿಧ ಸಂಟನೆಗಳು, ಆ ಭಾಗದ ಜನರು ಇಲ್ಲವೇ ಮಾಧ್ಯಮಗಳು ಮೇಲಿಂದ ಮೇಲೆ ಪ್ರಶ್ನಿಸಿದಾಗ ಈ ಬಗ್ಗೆ ಕಾರ್ಯಚಟುವಟಿಕೆಗಳು ಆರಂಭಗೊಳ್ಳುತ್ತಿರುವುದು ವಿಪರ್ಯಾಸ. ಅದರಲ್ಲೂ ಗತ ವೈಭವ ಸಾರುವ ಸಾಂಸತಿಕ ಕಾರ್ಯಕ್ರಮಗಳಿಗೆ ಪ್ರತಿ ವರ್ಷ ಇತರ ಚಟುವಟಿಕೆಗಳಂತೆ ನಿಗದಿತ ದಿನಾಂಕ ಗುರುತುಪಡಿಸದಿರುವುದು ಕೊಪಣ ನಾಡಿನ ಜನರ ದುರ್ದೈವ ಎನ್ನಬಹುದು. 2024ರಲ್ಲಿ ಆದ ಉತ್ಸವಗಳು 2025ರಲ್ಲಿ ಆಗಲೇ ಇಲ್ಲ. ಈ ಹಿಂದೆ ಇದ್ದ ಬರ, ಚುನಾವಣೆ ಸೇರಿ ಇನ್ನಿತರ ಯಾವುದೇ ಬಲವಾದ ಕಾರಣಗಳಿರಲಿಲ್ಲ. ಉತ್ಸವ ಮಾಡುತ್ತೇವೆ ಎನ್ನುತ್ತಲೇ ಸರ್ಕಾರ, ಜಿಲ್ಲಾಡಳಿತ ದಿನಗಳನ್ನು ದೂಡಿದ್ದು ವಿಪರ್ಯಾಸ.
ಕನಕಗಿರಿ ಉತ್ಸವಕ್ಕೆ ಆಸಕ್ತಿ ತೋರಿದರೂ ಜಾತ್ರೆ ಮತ್ತು ಉತ್ಸವ ಆಯೋಜನೆ ಸಂಬಂಧ ಕೆಲವೇ ಜನರು ಆಡಿದ ಮಾತುಗಳಿಗೆ ಸಚಿವರು ಜಿಲ್ಲೆಯ ಜನರ ಆಶಯ ಬಲಿಕೊಟ್ಟಿದ್ದು ಖೇದಕರ. ಉತ್ಸವಗಳು ನಾಡು, ಜಿಲ್ಲೆ, ರಾಜ್ಯಭಾರ ನಡೆಸಿದ ರಾಜಮನೆತನ, ಜನಸಾಮಾನ್ಯರ ಕಾರ್ಯಕ್ರಮ. ಅವುಗಳನ್ನು ಕೇವಲ ಒಂದು ಊರು, ತಾಲೂಕು, ಕ್ಷೇತ್ರಕ್ಕೆ ಸೀಮಿತಗೊಳಿಸುತ್ತಿರುವುದು ಸಂಕುಚಿತತೆಯ ಸಂಕೇತ.
ಅನುದಾನ ಬಿಡುಗಡೆ
ಜಿಲ್ಲಾಡಳಿತದಿಂದ ಕನಕಗಿರಿ, ಆನೆಗೊಂದಿ ಉತ್ಸವಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು ತಲಾ ಮೂರು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಹೆಚ್ಚುವರಿ ತಲಾ ಮೂರು ಕೋಟಿ ರೂ. ಕೋರಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಹಣಕಾಸು ಇಲಾಖೆ ಅನುಮೋದನೆ ನೀಡಬೇಕಿದೆ. ಸದ್ಯ ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಜನಗಣತಿಯೂ ಆರಂಭವಾಗಿದೆ. ಗ್ರಾಪಂ, ನಗರ-ಸ್ಥಳಿಯ ಸಂಸ್ಥೆಗಳ ಅವಧಿ ಮುಗಿದಿದ್ದು ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ವಿನಾ ಕಾರಣ ಸಮಯ ವ್ಯರ್ಥ ಮಾಡದೇ ದಿನಾಂಕ ನಿಗದಿಪಡಿಸಿ ಉತ್ಸವ ಆಚರಣೆಗೆ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಉತ್ಸಾಹ ತೋರಲಿ ಎಂಬುದು ಜನರ ಆಶಯ.
ಕನಕಗಿರಿ, ಆನೆಗೊಂದಿ ಉತ್ಸವಗಳಿಗೆ ತಲಾ ಮೂರು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಹಣಕಾಸು ಇಲಾಖೆ ಅನುಮೋದನೆ ನೀಡಬೇಕಿದೆ. ಉಸ್ತುವಾರಿ ಸಚಿವರ ಗಮನಕ್ಕೆ ವಿಷಯ ತರಲಾಗುವುದು. ಸಭೆ ನಡೆಸಿ ದಿನಾಂಕ ನಿಗದಿಪಡಿಸಿ ಉತ್ಸವ ಆಯೋಜನೆ ಮಾಡತ್ತೇವೆ.