ಕೊಪ್ಪಳ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಕನಕಗಿರಿ ಉತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಎಸ್ಪಿ ಡಾ.ರಾಮ್​ ಎಲ್​ ಅರಸಿದ್ದಿ, ಜಿಪಂ ಸಿಇಓ ವರ್ಣಿತ್​ ನೇಗಿ, ಎಡಿಸಿ ಸಿದ್ರಾಮೇಶ್ವರ, ಜಿಪಂ ಡಿಎಸ್​ ಟಿ.ಕೃಷ್ಣಮೂರ್ತಿ, ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಶರಣೇಗೌಡ ಪಾಟೀಲ್​ ಇದ್ದರು. 
ಕೊಪ್ಪಳ

ಕನಕಗಿರಿ ಉತ್ಸವದ ಸಮಿತಿಗಳು ಚುರುಕಾಗಿ ಕಾರ್ಯನಿರ್ವಹಿಸಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ.ಸುರೇಶ ಬಿ.ಇಟ್ನಾಳ ನಿರ್ದೇಶನ
  • ಉತ್ಸವ ಪೂರ್ವ ಸಿದ್ಧತಾ ಸಭೆ
ಕೊಪ್ಪಳ : ಜಿಲ್ಲೆಯ ಐತಿಹಾಸಿಕ ಪುಣ್ಯಕ್ಷೇತ್ರ ಕನಕಗಿರಿಯಲ್ಲಿ ಮೇ 16 ಮತ್ತು 17ರಂದು ನಡೆಯಲಿರುವ ಕನಕಗಿರಿ ಉತ್ಸವ&2026ರ ಅಂಗವಾಗಿ ರಚಿಸಲಾದ ವಿವಿಧ ಸಮಿತಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು ಎಂದು ಡಿಸಿ ಡಾ. ಸುರೇಶ ಬಿ. ಇಟ್ನಾಳ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕನಕಗಿರಿ ಉತ್ಸವ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಹಿಂದಿನ ಸಭೆಯಲ್ಲಿ 16ಕ್ಕೂ ಹೆಚ್ಚು ಸಮಿತಿಗಳ ಅಧಿಕಾರಿಗಳಿಗೆ ಕಾರ್ಯಭಾರ ಹಂಚಿಕೆ ಮಾಡಲಾಗಿದ್ದು, ಅವುಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಹೆಚ್ಚಿನ ಒತ್ತು ನೀಡಬೇಕು. ಉತ್ಸವ ಮೆರವಣಿಗೆ ಮಾರ್ಗ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್​ ಅಲಂಕಾರ ವ್ಯವಸ್ಥೆ ಮಾಡಬೇಕು. ಜಾನಪದ ಕಲಾ ತಂಡಗಳು ಮತ್ತು ಕಲಾವಿದರ ಆಯ್ಕೆ ಶೀಘ್ರ ಪೂರ್ಣಗೊಳ್ಳಬೇಕು. ಗಣ್ಯರು, ಕಲಾವಿದರು, ಪತ್ರಕರ್ತರು ಸೇರಿದಂತೆ ಎಲ್ಲಾ ಆಹ್ವಾನಿತರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದರು.
ಸಾರ್ವಜನಿಕರಿಗೆ ಸ್ವಚ್ಛ ಕುಡಿಯುವ ನೀರು, ಆಹಾರ ಮತ್ತು ಉಪಹಾರ ವ್ಯವಸ್ಥೆ ಕಲ್ಪಿಸುವಲ್ಲಿ ಗುಣಮಟ್ಟ ಕಾಪಾಡಬೇಕು. ಕುಸ್ತಿ, ಕಬಡ್ಡಿ, ವಾಲಿಬಾಲ್​ ಸೇರಿದಂತೆ ಕ್ರೀಡಾ ಸ್ಪರ್ಧೆಗಳಿಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ವೇದಿಕೆ, ಪೇಂಡಾಲ್​, ಗ್ರೀನ್​ ರೂಮ್​, ಬ್ಯಾರಿಕೇಡಿಂಗ್​ ಮತ್ತು ವಾಹನ ಪಾರ್ಕಿಂಗ್​ ವ್ಯವಸ್ಥೆ ಸರಿಯಾಗಿ ಮಾಡಬೇಕು ಎಂದು ಸಂಬಂಧಿತ ಸಮಿತಿಗಳಿಗೆ ನಿರ್ದೇಶನ ನೀಡಿದರು.
ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆಗಳನ್ನು ನಿರ್ಮಿಸಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಅವಕಾಶ ನೀಡಬೇಕು. ಉತ್ಸವದ ವೇಳೆ ಹೆಚ್ಚುವರಿ ಬಸ್​ ವ್ಯವಸ್ಥೆ ಕಲ್ಪಿಸಲು ಕೆಎಸ್​ಆರ್​ಟಿಸಿ ಕ್ರಮ ವಹಿಸಬೇಕು ಎಂದರು.
ಎಸ್ಪಿ ಡಾ.ರಾಮ್​ ಎಲ್​ ಅರಸಿದ್ದಿ ಮಾತನಾಡಿ, ಉತ್ಸವಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳು ಹಾಗೂ ಕಲಾವಿದರು ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತ ಭದ್ರತಾ ವ್ಯವಸ್ಥೆಗೆ ಈಗಿನಿಂದಲೇ ಕ್ರಮ ವಹಿಸಬೇಕು ಎಂದು ಪೊಲೀಸ್​ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಪಂ ಸಿಇಓ ವರ್ಣಿತ್​ ನೇಗಿ, ಎಡಿಸಿ ಸಿದ್ರಾಮೇಶ್ವರ, ಜಿಪಂ ಡಿಎಸ್​ ಟಿ.ಕೃಷ್ಣಮೂರ್ತಿ, ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಶರಣೇಗೌಡ ಪಾಟೀಲ್​, ಕನಕಗಿರಿ ತಾಲೂಕು ಕಸಾಪ ಅಧ್ಯಕ್ಷ ಮಹೇಬೂಬ್​, ಮುಖ್ಯ ಲೆಕ್ಕಾಧಿಕಾರಿ ಅಮೀನ ಅತ್ತಾರ, ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಇತರರಿದ್ದರು.