ಕನಕಗಿರಿ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಪಪಂ ಅಧ್ಯಕ್ಷೆ ತನುಶ್ರೀ ಟಿ.ಜೆ., ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಮತ್ತಿತರರು ಉಪಸ್ಥಿತರಿದ್ದರು. 
ಕೊಪ್ಪಳ

ಕನಕಗಿರಿ ಉತ್ಸವಕ್ಕೆ ಭರಪೂರ ಸಿದ್ಧತೆ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ನಿರ್ದೇಶನ
  • ಹೆಲಿಕಾಪ್ಟರ್ ರೈಡ್ ಸಂಭ್ರಮ
  • ಫಲಪುಷ್ಪ ಪ್ರದರ್ಶನದಲ್ಲಿ ಗರುಡೋತ್ಸವ
ಕನಕಗಿರಿ: ಕನಕಗಿರಿ ಉತ್ಸವದ ಮುಖ್ಯ ವೇದಿಕೆಯ ಬಳಿ 35 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸೂಚಿಸಿದರು.
ಉತ್ಸವದ ಪೂರ್ವಸಿದ್ಧತೆಗಳ ಅಂಗವಾಗಿ ಬುಧವಾರ ನಡೆದ ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿದರು. ಎರಡನೇ ವೇದಿಕೆ ಅಚ್ಚುಕಟ್ಟಾಗಿರಬೇಕು. ಮೆರವಣಿಗೆ ಮಾರ್ಗದಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಬೇಕು. ಅಂಬಾರಿ ಮೆರವಣಿಗೆ ಹಾಗೂ ಕಲಾ ತಂಡಗಳ ಪ್ರದರ್ಶನಕ್ಕೆ ತಯಾರಿ ನಡೆಸಬೇಕು. ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬೇಕು. ಈಗಾಗಲೇ ರಾಜ್ಯ ಮಟ್ಟದ ಕಲಾವಿದರ ಪಟ್ಟಿ ಅಂತಿಮಗೊಂಡಿದ್ದು, ಸ್ಥಳೀಯ ಕಲಾವಿದರ ಆಯ್ಕೆ ಶೀಘ್ರ ಪೂರ್ಣಗೊಳಿಸಬೇಕು. ಸಂಭಾವನೆ ಪಾವತಿಯಲ್ಲಿ ಗೊಂದಲವಾಗಬಾರದು. ಅತಿಥಿಗಳ ವಸತಿಗಾಗಿ 50 ಕೊಠಡಿ ಮೀಸಲಿಡಬೇಕು. ಎಪಿಎಂಸಿ ಆವರಣದಲ್ಲಿ ಸಾರ್ವಜನಿಕರಿಗೆ ನೀಡುವ ಊಟದ ವ್ಯವಸ್ಥೆಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಆಹಾರ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಿಂದ ಬಸ್ ವ್ಯವಸ್ಥೆ ಕಲ್ಪಿಸಬೇಕು. ಸಿಎಂ ಹೆಲಿಕಾಪ್ಟರ್ ಇಳಿಯಲು ಬೈಲಕ್ಕುಂಪುರ ರಸ್ತೆಯ ಜಮೀನಿನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರ ಹೆಲಿಕಾಪ್ಟರ್ ರೈಡ್‌ಗಾಗಿ ತಾವರಗೇರಾ ರಸ್ತೆಯ ಖಾಸಗಿ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಿಸಬೇಕು ಎಂದು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು.
ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಫಲಪುಷ್ಪ ಪ್ರದರ್ಶನದಲ್ಲಿ ಗರುಡೋತ್ಸವದ ಮಾದರಿಯು ವಿಶೇಷ ಆಕರ್ಷಣೆಯಾಗಿರಲಿದೆ. ಇದರೊಂದಿಗೆ ಹೊಸ ತಂತ್ರಜ್ಞಾನದ ಪರಿಕರಗಳು ಹಾಗೂ ಎನ್‌ಆರ್‌ಎಲ್ಎಂ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದರು.