ಗಂಗಾವತಿ ತಾಲೂಕಾಡಳಿತ ಸೌಧದಲ್ಲಿ ಭಕ್ತ ಕನಕದಾಸ ಜಯಂತಿ ನಿಮಿತ್ತ ತಾಲೂಕಾಡಳಿತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಮಾಜದ ಮುಖಂಡರು ಸಲಹೆ ನೀಡಿದರು. ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಕನಕದಾಸ ಕುರುಬರ ಸಂಘದ ತಾಲೂಕಾಧ್ಯಕ್ಷ ವಿಠಲಾಪುರ ಯಮನಪ್ಪ, ಮುಖಂಡರಾದ ಕೆ.ನಾಗೇಶಪ್ಪ, ಡ್ಯಾಗಿ ರುದ್ರೇಶ ಇತರರಿದ್ದರು.
ಗಂಗಾವತಿ: ಸಮುದಾಯದವರ ಸಹಕಾರರೊಂದಿಗೆ ದಾಸಶ್ರೇಷ್ಟ ಕನಕದಾಸ ಜಯಂತ್ಯುತ್ಸವ ಅದ್ದೂರಿ ಮತ್ತು ಅರ್ಥಪೂರ್ಣ ವಾಗಿ ಆಚರಿಸಲಾಗುವುದು ಎಂದು ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಹೇಳಿದರು.
ನಗರದ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ಭಕ್ತ ಕನಕದಾಸ ಜಯಂತ್ಯುತ್ಸವ ನಿಮಿತ್ತ ತಾಲೂಕಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನ.8ರಂದು ಹೊಸಳ್ಳಿ ರಸ್ತೆಯ ಕನಕದಾಸ ವೃತ್ತದಲ್ಲಿ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಕಂಚಿನ ಪುತ್ಥಳಿಗೆ ವಿಶೇಷ ಪೂಜೆ ಮತ್ತು ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕನಕದಾಸ ಕುರುಬರ ಸಂಘದ ತಾಲೂಕಾಧ್ಯಕ್ಷ ವಿಠಲಾಪುರ ಯಮನಪ್ಪ ಮಾತನಾಡಿ, ವಿಶ್ವಚೇತನ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಿದ್ದು, ಜೀವನ ಮತ್ತು ದಾಸಸಾಹಿತ್ಯ ಕುರಿತು ಉಪನ್ಯಾಸ ಆಯೋಜಿಸಬೇಕು. ಸಮುದಾಯದ ಮಕ್ಕಳಿಗೆ ಪ್ರತಿಭಾಪುರಸ್ಕಾರ ಸೇರಿ ಪ್ರೋತ್ಸಾಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ವಿವಿಧ ಸಮುದಾಯದ ಮುಖಂಡರನ್ನು ಆಹ್ವಾನಿಸಬೇಕಿದ್ದು, ಎಲ್ಲ ಇಲಾಖೆ ಸಿಬ್ಬಂದಿ ಕಡ್ಡಾಯ ಭಾಗವಹಿಸುವಂತೆ ಸಲಹೆ ನೀಡಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿ, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ನಗರಸಭೆ ವ್ಯವಸ್ಥಾಪಕ ಷಣ್ಮುಖ, ಸಿಡಿಪಿಒ ಜಯಶ್ರೀ ರಾಜಪುರೋಹಿತ್, ಜೆಸ್ಕಾಂ ಎಇಇ ಮಂಜುನಾಥ, ತಾಪಂ ಮಾಜಿ ಅಧ್ಯಕ್ಷ ಶರಣೇಗೌಡ ಮಾ.ಪಾಟೀಲ್, ಹಾಲುಮತ ಸಮಾಜ ಮುಖಂಡರಾದ ಕೆ.ನಾಗೇಶಪ್ಪ, ವಿರೂಪಾಕ್ಷಪ್ಪ ಹೊಸಳ್ಳಿ, ಬಸವರಾಜ ಲಿಂಗರಾಜ್ ಕ್ಯಾಂಪ್, ಡ್ಯಾಗಿ ರುದ್ರೇಶ, ಬಿ.ವೆಂಕಟೇಶ, ಶಿವಬಸನಗೌಡ, ನೀಲಪ್ಪ ಸಣ್ಣಕ್ಕಿ ಕೆ.ತಿರುಕಪ್ಪ, ರಾಮಕೃಷ್ಣ, ಪುಂಡಗೌಡ ಇತರರಿದ್ದರು.