ಕನಕಗಿರಿ ಕನಕಾಚಲ ದೇವಸ್ಥಾನದ ಮುಂಭಾಗದ ದಾಸೋಹ ಭವನದ ಹೊರನೋಟ. 
ಕೊಪ್ಪಳ

ದೇಗುಲದ ದಾಸೋಹ ಭವನ ನಿರುಪಯುಕ್ತ

ಪ್ರಮುಖ ಮುಖ್ಯಾಂಶಗಳು

  • ಇನ್ನೂ ಮುಗಿಯದ ಹಸ್ತಾಂತರ ಪ್ರಕ್ರಿಯೆ
  • ಕನಕಾಚಲ ಭಕ್ತರ ಅಸಮಾಧಾನ
ಕನಕಗಿರಿ: ಪಟ್ಟಣದ ಐತಿಹಾಸಿಕ ಕನಕಾಚಲ ದೇವಸ್ಥಾನಕ್ಕೆ ಬರುವ ನೂರಾರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲು 2019-20ನೇ ಸಾಲಿನಲ್ಲಿ ನಿರ್ಮಿಸಲು ಆರಂಭಿಸಲಾಗಿದ್ದ ದಾಸೋಹ ಭವನವು ಇದುವರೆಗೂ ಸಂಬಂಧಿಸಿದ ಇಲಾಖೆಗೆ ಹಸ್ತಾಂತರವಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಾರ್ವಜನಿಕರ ತೆರಿಗೆ ಹಣದಿಂದ ಆರಂಭಿಸಲಾಗಿರುವ ಈ ಯೋಜನೆ ಸಾರ್ವಜನಿಕರಿಗೆ ಬಳಕೆಯಾಗದಿರುವುದು ದೇವಸ್ಥಾನಕ್ಕೆ ಬರುವ ಭಕ್ತರ ಬೇಸರಕ್ಕೆ ಕಾರಣವಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ 2019-20ನೇ ಸಾಲಿನ ಬಂಡವಾಳ ವೆಚ್ಚ ಯೋಜನೆಯಡಿ ಕಾಮಗಾರಿ ಆರಂಭಿಸಲಾಗಿದ್ದು, ಇದಕ್ಕೆ ಒಂದು ಕೋಟಿ ರೂ. ಅನುದಾನ ಮೀಸಲೀರಿಸಲಾಗಿತ್ತು. ಕಟ್ಟಡ ಕಾಮಗಾರಿಯನ್ನು ಕೆಆರ್‌ಐಡಿಎಲ್ಗೆ ವಹಿಸಲಾಗಿತ್ತು. ಆದರೆ, ಕಾಮಗಾರಿಗೆ ಮೀಸಲಿರಿಸಿದ್ದ ಅನುದಾನವೆಲ್ಲ ಖರ್ಚಾಗಿದ್ದರೂ ಕಾಮಗಾರಿ ಮುಗಿದಿರಲಿಲ್ಲ. ಈ ಬಗ್ಗೆ ಭಕ್ತರಿಂದ ನಾನಾ ಬಗೆಯ ಆರೋಪಗಳು ಕೇಳಿಬಂದಿದ್ದವು. ಭಕ್ತರು, ಜನಪ್ರತಿನಿಧಿಗಳ ಒತ್ತಾಯದ ನಂತರ ಕಾಮಗಾರಿ ಆರಂಭವಾಗಿ ಕುಂಟುತ್ತ ಸಾಗಿ ಆರು ವರ್ಷಗಳ ಬಳಿಕ ಮುಕ್ತಾಯಗೊಂಡಿದೆ.
ಕಾಮಗಾರಿ ಮುಕ್ತಾಯಗೊಂಡಿದ್ದರೂ ಉದ್ದೇಶಿತ ಯೋಜನೆಗೆ ಬಳಕೆ ಮಾಡಲು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗಿಲ್ಲ. ಕಾಮಗಾರಿಗೆ ಪೂರ್ಣಗೊಳ್ಳಲು ಇಷ್ಟೊಂದು ವರ್ಷ ತೆಗೆದುಕೊಂಡಿದ್ದು, ಹಸ್ತಾಂತರ ಮಾಡಲು ಸಂಬಂಧಿಸಿದ ಇಲಾಖೆ ಮುಂದಾಗದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಎಸ್ಟಿಮೇಟ್‌ನಂತೆ ಕಾಮಗಾರಿ ಪೂರ್ಣಗೊಂಡಿಲ್ಲ. ಅದಕ್ಕಾಗಿ ಕೆಆರ್ಐಡಿಎಲ್ನ ಈ ಹಿಂದಿನ ಹಾಗೂ ಈಗಿನ ಅಧಿಕಾರಿಗಳ ನಡುವೆ ತಿಕ್ಕಾಟವೂ ನಡೆದಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಕಳಪೆ ಕಾಮಗಾರಿ ಆರೋಪ
2019ರಲ್ಲಿ ಆರಂಭವಾದ ಈ ಕಾಮಗಾರಿ ಕುಂಟುತ್ತ ಸಾಗಿದ್ದು, ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಾಗಿದೆ ಎಂದು ಭಕ್ತರು ಆರೋಪಿಸಿದ್ದಾರೆ. ಕಟ್ಟಡಕ್ಕೆ ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ಕಾಮಗಾರಿ ಪೂರ್ಣಗೊಳ್ಳಲು ಆರು ವರ್ಷ ತೆಗೆದುಕೊಂಡಿರುವುದರಿಂದ ಬಿಸಿಲಿಗೆ ಕಟ್ಟಡದ ಗಟ್ಟಿತನ ಪ್ರಶ್ನಾರ್ಹವಾಗಿದೆ ಎಂಬುದು ಭಕ್ತರ ಮಾತು. ಕಾಮಗಾರಿಗೆ ಬಳಸಲಾದ ಮರಳು, ಇಟ್ಟಿಗೆ, ಕಾಂಕ್ರೀಟ್ ಸಹ ಗುಣಮಟ್ಟದಿಂದ ಕೂಡಿಲ್ಲ ಎಂದು ಭಕ್ತರು ದೂರಿದ್ದಾರೆ.

ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾದ ಅನುದಾನ ಭಕ್ತರಿಗೆ ಅನುಕೂಲವಾಗುವ ಬದಲು ಪೋಲಾಗಿದೆ. ಕಟ್ಟಡವು ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ಕೆಆರ್‌ಐಡಿಎಲ್ನವರು ಎಸ್ಟಿಮೇಟ್‌ನಂತೆ ಕಾಮಗಾರಿ ಪೂರ್ಣಗೊಳಿಸಿಲ್ಲವಾದ್ದರಿಂದ ಹಸ್ತಾಂತರಕ್ಕೆ ಮುಂದಾಗಿಲ್ಲ.

ಕೆಆರ್‌ಐಡಿಎಲ್ನವರು ದಾಸೋಹ ಭವನವನ್ನು ಇಲಾಖೆಗೆ ಹಸ್ತಾಂತರಿಸಲು ಮುಂದಾಗಿಲ್ಲ. ಕಾಮಗಾರಿ ಪೂರ್ಣಗೊಂಡಿದೆ ಎಂದು ಕೆಆರ್‌ಐಡಿಎಲ್ನವರು ಪತ್ರ ವ್ಯವಹಾರ ನಡೆಸಿದರೆ, ಕೇಂದ್ರ ಕಚೇರಿಯಿಂದ ನಿಯಮಾನುಸಾರವಾಗಿ ಹಸ್ತಾಂತರಕ್ಕೆ ಮುಂದಾಗಲಾಗುವುದು.