ತಾವರಗೇರಾ ಠಾಣೆಯಲ್ಲಿ ಸರ್ಕಾರಿ ಅಭಿಯೋಜಕ ಇಲಾಖೆಯಡಿ ನೊಂದವರಿಗೆ ನ್ಯಾಯ ಕಾರ್ಯಕ್ರಮ ನಡೆಯಿತು. ಗಂಗಾವತಿ ಡಿವೈಎಸ್ಪಿ ನ್ಯಾಮಗೌಡ , ಕ್ರೈಮ್ ಸಿಪಿಐ ಆಂಜನೆಯಪ್ಪ, ಪಿಎಸ್‌ಐ ಚಂದ್ರಪ್ಪ ಎಚ್, ಮುಖ್ಯಪೇದೆ ಬಸವರಾಜ ಇಂಗಳದಾಳ ಇತರರಿದ್ದರು. 
ಕೊಪ್ಪಳ

ಅಪರಾಧ ತಡೆಯಲು ಕೈ ಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ಸಮಾಜದಲ್ಲಿ
  • ನೊಂದವರ
  • ಸಹಾಯ
ತಾವರಗೇರಾ: ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸಮಾಜದಲ್ಲಿ ನೊಂದವರ ಸಹಾಯ ಹಸ್ತ ಚಾಚಲು ಮುಂದಾಗಬೇಕು ಎಂದು ಬಳ್ಳಾರಿ ವಿಭಾಗೀಯ ಅಭಿಯೋಜಕ ಬಿಎಸ್ ಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೊಂದವರಿಗೆ ನ್ಯಾಯ ಎಂಬ ಜಾಗೃತಿ ಯೋಜನೆ  ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಯುವಕರು ಸಮಾಜದಲ್ಲಿ ನಡೆಯುವ ಅಹಿತಕರ ಘಟನೆ ಹಾಗೂ ಅನ್ಯಾಯಗಳನ್ನು ಸರಿಪಡಿಸುವಲ್ಲಿ ಇಲಾಖೆಯೊಂದಿಗೆ ಕೈ ಜೋಡಿಸಲಿ. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಅತ್ಯಮೂಲ್ಯವಾಗಿದೆ ಎಂದರು.
ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಆತ್ಮವಲೋಕನ ಮಾಡಿಕೊಂಡು ಸಮಾಜವನ್ನು ಒಳ್ಳೆದಾರಿಗೆ ತರುವ ಕೆಲಸಮಾಡಬೇಕು. ಜಿಲ್ಲೆಯಲ್ಲಿ ಇತ್ತೀಚೆಗೆ ಗಾಂಜಾ ಮಾದಕ ದ್ರವ್ಯಗಳ ಚಟುವಟಿಕೆಗೆ ಯುವಕರು ಬಲಿಯಾಗುತ್ತಿರುವುದು ಕಂಡು ಬರುತ್ತಿದ್ದು ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ ಅಪರಾಧಗಳು ನಡೆದಂತೆ ಜಾಗೃತಿ ವಹಿಸಬೇಕು. ಹಲವಾರು ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಜೀವನ ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಸದೃಢ ಸಮಾಜ ನಿರ್ಮಿಸುವಲ್ಲಿ ಮುಂದೆ ಬರಬೇಕು ಎಂದರು.
ಗಂಗಾವತಿ ಡಿವೈಎಸ್ಪಿ ನ್ಯಾಮಗೌಡ ಮಾತನಾಡಿ, ಪಟ್ಟಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಫುಟ್‌ಪಾತ್‌ನಲ್ಲಿರುವ ಅಂಗಡಿಗಳನ್ನು ತೆರವು ಗೊಳಿಸುವಲ್ಲಿ ಪಟ್ಟಣ ಪಂಚಾಯಿತಿಯೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಕ್ರೈಂ ಸಿಪಿಐ ಆಂಜನೇಯಪ್ಪ, ಸ್ಥಳೀಯ ಪಿಎಸ್‌ಐ ಚಂದ್ರಪ್ಪ ಎಚ್., ಮುಖ್ಯಪೇದೆ ಬಸವರಾಜ ಇಂಗಳದಾಳ ಇತರರಿದ್ದರು.