ಕಾರಟಗಿ ಸಮೀಪದ ಮರ್ಲಾನಹಳ್ಳಿ ಗ್ರಾಮದಲ್ಲಿ ತಾಲೂಕು ಮಟ್ಟದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾ., ಪ್ರಮುಖರಾದ ರಮೇಶ ಬನ್ನಿಕೊಪ್ಪ, ಸೋಮನಾಥ ದೊಡ್ಡಮನಿ ಇತರರಿದ್ದರು. 
ಕೊಪ್ಪಳ

ಸಮ್ಮೇಳನ ಯಶಸ್ಸಿಗೆ ಕೈಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಕೋರಿಕೆ
  • ಕಾರಟಗಿ ಸಮ್ಮೇಳನ ಲಾಂಛನ ಅನಾವರಣ
ಕಾರಟಗಿ: ತಾಲೂಕು ಮಟ್ಟದ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನ ಫೆ.21ರಂದು ನಡೆಯಲಿದ್ದು, ಸಮ್ಮೇಳನದ ಲಾಂಛನವನ್ನು ತಾಲೂಕಿನ ಮರ್ಲಾನಹಳ್ಳಿಯ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್‌ಪಾಟೀಲ್ ಅನಾವರಣಗೊಳಿಸಿದರು.
ನಂತರ ಮಾತನಾಡಿ ಭಾಷೆ, ಜನಪದ, ಸಾಹಿತ್ಯದ ಬೆಳವಣಿಗೆಗೆ ಸಾಹಿತ್ಯ ಸಮ್ಮೇಳನಗಳು ಜೀವಾಳವಾಗಿವೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೊಸ ಚಿಂತನೆ, ವಿನೂತನ ಕಾರ್ಯಕ್ರಮ, ಸಾಹಿತ್ಯಾಸಕ್ತರ ವಿಶಾಲ ಭಾಗವಹಿಸುವಿಕೆ ಬೇಕಿದೆ. ಮರ್ಲಾನಹಳ್ಳಿ ಗ್ರಾಮದಲ್ಲಿ ಸಮ್ಮೇಳನ ನಡೆಯಲಿದ್ದು, ಈಗಾಗಲೇ ನಾನಾ ಸಮಿತಿಗಳ ರಚನೆ ಹಾಗೂ ಸಕಲ ಸಿದ್ಧತೆ ಆರಂಭಿಸಲಾಗಿದೆ.
ಸಮ್ಮೇಳನದ ಯಶಸ್ಸಿಗೆ ಸಂಘ-ಸಂಸ್ಥೆಗಳೊಂದಿಗೆ ನಿರಂತರ ಸಭೆ ನಡೆಸಲಾಗುತ್ತಿದೆ. ಸಮ್ಮೇಳನದಲ್ಲಿ ತಾಲೂಕಿನ ಇತಿಹಾಸ, ಕಲೆ, ಸಾಹಿತ್ಯ ಮತ್ತು ಪರಂಪರೆ ಪ್ರಸಾರದ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಸಿದ್ದಯ್ಯ ಪುರಾಣಿಕ್ ಟ್ರಸ್ಟ್‌ನ ಸದಸ್ಯ, ಕವಿ ರಮೇಶ ಬನ್ನಿಕೊಪ್ಪ ಮಾತನಾಡಿ, ಸಮ್ಮೇಳನದ ಲಾಂಛನದಲ್ಲಿ ಕಾರಟಗಿ ಪಟ್ಟಣದ ಐತಿಹಾಸಿಕ ಪುಷ್ಕರಣಿ, ವೀರಗಲ್ಲು, ತಾಲೂಕಿನ ಜೀವನಾಡಿ ತುಂಗಭದ್ರಾ ಎಡದಂಡೆ ನಾಲೆ, ಭತ್ತದ ಗದ್ದೆಗಳು, ಅಭಿವೃದ್ಧಿಯ ಸಂಕೇತವಾದ ರೈಲು, ಮರ್ಲಾನಹಳ್ಳಿ ಗ್ರಾಮದ ಹೆಗ್ಗುರುತು ಹುಣಸೆ ಮರ ಹಾಗೂ ದೇವಸ್ಥಾನದ ಗೋಪುರಗಳು, ರೈಸ್‌ಪಾರ್ಕ್, ಅಕ್ಕಿಗಿರಣಿ ಉದ್ಯಮ ಸೇರಿದಂತೆ ಹಲವಾರು ಅಭಿವೃದ್ಧಿಯ ಮಾದರಿಗಳನ್ನುತೋರಿಸಲಾಗಿದೆ ಎಂದರು.
ಕಸಾಪ ಜಿಲ್ಲಾ ಕೋಶಾಧ್ಯಕ್ಷ ರಮೇಶ ಕುಲಕರ್ಣಿ, ನಿಕಟಪೂರ್ವ ತಾಲೂಕಾಧ್ಯಕ್ಷ ಚನ್ನಬಸಪ್ಪ ವಕ್ಕಳದ, ಕಾರ್ಯದರ್ಶಿ ಮಂಜುನಾಥ ಚಿಕೇನಕೊಪ್ಪ, ಸನೌಸಂ ತಾಲೂಕಾಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಪ್ರಾ.ಶಾ.ಶಿ ಸಂಘದ ತಾಲೂಕಾಧ್ಯಕ್ಷ ವಿಠಲ್ ಜೀರಗಾಳಿ, ಜಿಪಂ ಮಾಜಿ ಸದಸ್ಯ ಡಿ.ಕೃಷ್ಣಪ್ಪ, ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ರಫಿ, ಮಾಜಿ ಸದಸ್ಯ ಜೆ.ತಿಪ್ಪಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎಚ್.ರವಿನಂದ, ಎಂ.ಸುಬ್ಬಾರಾವ್, ಜಾನಪದ ಅಕಾಡೆಮಿ ಸದಸ್ಯ ಮಹೆಬೂಬ್ ಕಿಲ್ಲೇದಾರ್ ಇತರರಿದ್ದರು.